Advertisement

ಸೀತಾನದಿ ಹರಿದರೂ ಹೆಬ್ರಿಯಲ್ಲಿ ನೀರಿಗೆ ಬರ

06:00 AM Apr 11, 2018 | Team Udayavani |

ಹೆಬ್ರಿ: ಏರುತ್ತಿರುವ ಬಿಸಿಲಿನ ಬೇಗೆ ಹೆಬ್ರಿಗೆ ತೀವ್ರ ನೀರಿನ ಅಭಾವ ಸೃಷ್ಟಿಸಿದೆ. ಹೆಬ್ರಿ ಗ್ರಾ.ಪಂ. ವ್ಯಾಪ್ತಿಯ ಬಚ್ಚಪ್ಪು ಹಾಗೂ ಬಂಗಾರುಗುಡ್ಡೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. 

Advertisement

ಸೀತಾನದಿಗೆ ಪಂಪ್‌!
ಹೆಬ್ರಿಯ ನೀರಿನ ಮೂಲ ಸೀತಾನದಿ. ಗ್ರಾಮದ ಕೆಲವು ಭಾಗಗಳಲ್ಲಿ ನೀರಿನ ಮೂಲ ಕಡಿಮೆಯಾಗುತ್ತಿದ್ದರೂ, ಇಲ್ಲಿನ ಜನ ಸೀತಾನದಿಗೆ ಪಂಪ್‌ ಅಳವಡಿಸಿ ಅವ್ಯಾಹತವಾಗಿ ನೀರು ತೆಗೆಯುತ್ತಿದ್ದಾರೆ. ಕೂಡ್ಲುವಿನಿಂದ ಕುಚ್ಚಾರು ತನಕ ಸುಮಾರು 110 ಪಂಪ್‌ ಸೆಟ್‌ ಅಳವಡಿಸಲಾಗಿದ್ದು, ದಿನವೀಡೀ ನೀರನ್ನು ತಮ್ಮ ಕೃಷಿ ಕಾರ್ಯಕ್ಕೆ, ಇತರ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ಇದರಿಂದ ನೀರಿನ ಸೆಲೆ ಬತ್ತಿ ಹೋಗುತ್ತಿದ್ದು, ನೀರು ಇಲ್ಲದ ಕಡೆಗಳಲ್ಲಿ ಮತ್ತಷ್ಟು ಆತಂಕ ತಂದಿದೆ.  

 ಬಹುಗ್ರಾಮ ಯೋಜನೆ ವಿಳಂಬ 
ಹೆಬ್ರಿಯ ಸುಮಾರು 345 ಮನೆಗಳಿಗೆ ನಲ್ಲಿಗಳ ಮೂಲಕ ನೀರು ಪೂರೈಕೆಯಾಗುತ್ತಿವೆ. ನೀರಿನ ಅಭಾವ ಇದ್ದ ಗ್ರಾಮದ ಕೆಲ ಭಾಗಗಳು ಮತ್ತು ಸುತ್ತಲಿನ ಇತರ 5 ಗ್ರಾಮ ಪಂಚಾಯತ್‌ ವ್ಯಾಪ್ತಿಯ 1400 ಮನೆಗಳಿಗೆ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ 2006ರಲ್ಲಿ ಆರಂಭಗೊಂಡ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. 5 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಣೆಕಟ್ಟು ಕಾಮಗಾರಿ ಮುಕ್ತಾಯವಾಗಿದೆ. 2ನೇ ಹಂತದ ಕಾಮಗಾರಿಗೆ ಈಗಷ್ಟೇ ಚಾಲನೆ ಸಿಕ್ಕಿದೆ. ಬೇಸಗೆಯ ನೀರಿನ ಅಲಭ್ಯತೆ ಬಗೆಹರಿಸಲೆಂದೇ ಈ ಯೋಜನೆ ಮಂಜೂರಾಗಿದ್ದರೂ, ಯೋಜನೆ ಕುಂಟುತ್ತಾ ಸಾಗಿದೆ. ಈ ಯೋಜನೆ ಆದಷ್ಟು ಬೇಗ ಪೂರ್ಣಗೊಂಡಲ್ಲಿ ಹೆಬ್ರಿ ಪಂಚಾಯತ್‌ನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.  

ಶುದ್ಧ ಕುಡಿಯುವ ನೀರು ನಮ್ಮ ಹಕ್ಕು 
ಶುದ್ಧ ಕುಡಿಯುವ ನೀರಿನ ಅಲಭ್ಯತೆ ಇರುವುದರಿಂದ ಪ್ರತಿ ಗ್ರಾಮ ಮಟ್ಟದಲ್ಲಿ ನೀರು ನೈರ್ಮಲ್ಯ ಸಮಿತಿಗಳು ರಚನೆಯಾಗಬೇಕಿದೆ. ಇದರ ಹಿನ್ನೆಲೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಿ ಶುದ್ಧ ನೀರು, ನೈರ್ಮಲ್ಯದ ಬಗ್ಗ ಚರ್ಚಿಸುವ ಅಗತ್ಯವಿದೆ. 

ರೈತರಿಗೆ ಸೂಚನೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸುಮಾರು 5.5ಕೋಟಿ ವೆಚ್ಚದ 2ನೇ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ. ಆದರೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ನದಿಗೆ ಅಳವಡಿಸಿದ ಪಂಪ್‌ಗ್ಳನ್ನು ಬೆಳಗ್ಗೆ 6ರಿಂದ 2ಗಂಟೆಯ ತನಕ ಮಾತ್ರ ಬಳಸುವಂತೆ ಮೆಸ್ಕಾಂ ಮೂಲಕ ರೈತರಿಗೆ ಸೂಚನೆ ನೀಡಲಾಗಿದೆ.
ವಿಜಯಾ,  ಪಿ.ಡಿ.ಒ., ಗ್ರಾ.ಪಂ. ಹೆಬ್ರಿ

Advertisement

 ಉದಯಕುಮಾರ್‌ ಶೆಟ್ಟಿ ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next