ಸಾಫ್ಟ್ವೇರ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವರ ಸಂಖ್ಯೆ ಕಡಿಮೆ ಏನಿಲ್ಲ. ಆ ಸಾಲಿಗೆ ಅರುಣ್ ಕುಮಾರ್ ಹೊಸ ಸೇರ್ಪಡೆ. ವಿಪ್ರೋದಲ್ಲಿ ಮೂರು ವರ್ಷ ಕೆಲಸ ಮಾಡಿದ್ದ ಅರುಣ್ ಕುಮಾರ್‌ಗೆ ಸಿನಿಮಾ ಮೇಲೆ ಪ್ರೀತಿ ಹೆಚ್ಚಾಗಿದ್ದರಿಂದ ಇದ್ದ ಕೆಲಸಕ್ಕೆ ಗುಡ್‌ಬೈ ಹೇಳಿ, ತಾವೇ ಕಥೆ, ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ “ಎಣ್ಣೆ ಪಾರ್ಟಿ’ ಎಂಬ ಕಿರುಚಿತ್ರ ನಿರ್ದೇಶಿಸಿದರು.
ಆ ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದರು. ಆ ಬಳಿಕ “ಆರ್ಯ ಮೌರ್ಯ’ ಮತ್ತು “ಸೈಕೋ ಶಂಕ್ರ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಆ ಅನುಭವದ ಮೇಲೆ “ದಿವಂಗತ ಮಂಜುನಾಥನ ಗೆಳೆಯರು’ ಚಿತ್ರ ನಿರ್ದೇಶಿಸಿದ್ದಾರೆ. ಇಲ್ಲೂ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅವರ ಗೆಳೆಯರು ಮತ್ತು ಸಂಬಂಧಿಕರು ಸಾಥ್ ಕೊಟ್ಟಿದ್ದಾರೆ. ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಿರುವುದು ಇನ್ನೊಂದು ವಿಶೇಷ.
“ದಿವಂಗತ ಮಂಜುನಾಥನ ಗೆಳೆಯರು’ ಚಿತ್ರಕ್ಕೆ ಏಳೆಂಟು ತಿಂಗಳ ಕಾಲ ಸ್ಕ್ರಿಪ್ಟ್ ಮಾಡಿಕೊಂಡು, ಆ ಬಳಿಕ ಹೊಸಬರಿಗೇ ಅವಕಾಶ ಕೊಡಬೇಕು ಅಂತ ಸುಮಾರು ನೂರು ಪ್ರತಿಭೆಗಳಿಗೆ ಆಡಿಷನ್ ನಡೆಸಿ, ಆ ಪೈಕಿ ಒಂದಷ್ಟು ಪ್ರತಿಭಾವಂತರನ್ನು ಆಯ್ಕೆ ಮಾಡಿ ಚಿತ್ರ ಮಾಡಿದ ಬಗ್ಗೆ ಹೇಳುತ್ತಾರೆ ಅರುಣ್ ಕುಮಾರ್. ಇಲ್ಲಿ ಸತ್ಯಜಿತ್ ಅವರು ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರುದ್ರ ಪ್ರಯೋಗ್, ಶೀತಲ್ ಪಾಂಡೆ, ಶಂಕರ್‌ಮೂರ್ತಿ, ರವಿ ಪೂಜಾರ್, ಸಚಿನ್, ನವೀನ್, ಅವಿನಾಶ್ ಮುದ್ದಪ್ಪ ಇತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟಕ್ಕೂ ಶೀರ್ಷಿಕೆಯೇ ಎಲ್ಲವನ್ನೂ ಹೇಳುವಂತಿದೆ. ಕಥೆ ಏನು? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕರು, ಐದು ಜನ ಇಂಜಿನಿಯರ್ ಫ್ರೆಂಡ್ಸ್ ವರ್ಷಗಳ ಬಳಿಕ ಭೇಟಿಯಾಗುತ್ತಾರೆ. ಅದೆಷ್ಟೋ ವರ್ಷ ಭೇಟಿಯಾಗದ ಅವರು ಒಂದು ಕಡೆ ಸೇರಿಕೊಂಡಾಗ, ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಒಬ್ಬೊಬ್ಬರದು ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ.
ವಿಶೇಷವೆಂದರೆ, ಒಂದು ಪೊಲೀಸ್ ಸ್ಟೇಷನ್‌ನಲ್ಲೇ ಇವರೆಲ್ಲರೂ ಭೇಟಿಯಾಗುತ್ತಾರೆ. ಯಾಕೆ ಭೇಟಿಯಾಗುತ್ತಾರೆ, ಅಲ್ಲೇನು ನಡೆಯುತ್ತೆ ಎಂಬುದು ಕಥೆ. ಚಿತ್ರಕ್ಕೆ ಪೂರ್ಣ ಮತ್ತು ಆಮಿನ್ ಛಾಯಾಗ್ರಹಣವಿದೆ. ವಿನಯ್‌ಕುಮಾರ್ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಆ ಪೈಕಿ ಗೋಪಿ ಒಂದು ಗೀತೆ ಬರೆದರೆ, ನಿರ್ದೇಶಕರು ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. ಚಿತ್ರ ನೈಜವಾಗಿ ಬರಬೇಕು ಎಂಬ ಕಾರಣಕ್ಕೆ, ಕೆಲವೆಡೆ ವಿತೌಟ್ ಲೈಟಿಂಗ್ಸ್ ಬಳಸಿ ಚಿತ್ರೀಕರಿಸಲಾಗಿದೆಯಂತೆ.