Advertisement

ಹಳ್ಳ ಹಿಡಿದ ಖಾರ್‌ಲ್ಯಾಂಡ್‌ ಯೋಜನೆ: ಉಪ್ಪು ನೀರು ತಡೆಯಲು 1,500 ಕೋ.ರೂ. ಮಾಸ್ಟರ್‌ ಪ್ಲಾನ್‌

01:39 AM Jul 25, 2024 | Team Udayavani |

ಉಡುಪಿ: ಸಮುದ್ರದ ಉಪ್ಪು ನೀರು ನದಿ/ಹೊಳೆಯ ಮೂಲಕ ಕೃಷಿ ಭೂಮಿಗೆ ನುಗ್ಗುವುದನ್ನು ತಡೆಯಲು ರೂಪಿಸಿದ ಖಾರ್‌ಲ್ಯಾಂಡ್‌ ಯೋಜನೆಗೆ ಈಗ ಅನುದಾನ ಕೊರತೆ ಮುಳುವಾಗಿದೆ. ಹಾಗಾಗಿ ಆರಂಭವಾದ ಯೋಜನೆಗಳು ಪೂರ್ಣಗೊಂಡಿಲ್ಲ. ಹಲವು ಕಡೆಗಳಲ್ಲಿ ಇನ್ನೂ ಆರಂಭ ವಾಗಿಯೇ ಇಲ್ಲ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ 50 ಕೋಟಿ ರೂ. ಮಂಜೂರಾಗಿದ್ದರೂ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಮಳೆಗಾಲ ಹಾಗೂ ಬೇಸಗೆಯಲ್ಲೂ ಕೃಷಿಕರಿಗೆ ಸಮಸ್ಯೆ ಆಗುತ್ತಿದೆ.

ಯೋಜನೆಯ ಸಾಧಕ-ಬಾಧಕ ಅರಿಯಲು ಉಭಯ ಜಿಲ್ಲೆಗಳಲ್ಲೂ ಎನ್‌ಐಟಿಕೆ ಸುರತ್ಕಲ್‌ನ ತಜ್ಞರು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ಸಿಆರ್‌ಝಡ್‌ ಜಿಲ್ಲಾ ಸಮಿತಿಯ ಮೂಲಕ ರಾಜ್ಯಕ್ಕೆ ಕಳು ಹಿಸಿದ್ದರು. ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಕೆಲವೆಡೆ ಕಾಮಗಾರಿ ಆರಂಭವಾಗಿದ್ದರೆ ಇನ್ನೂ ಕೆಲವೆಡೆ ಆರಂಭವೇ ಆಗಿಲ್ಲ.

ಏನಿದು ಖಾರ್‌ಲ್ಯಾಂಡ್‌ ಯೋಜನೆ
ಕರಾವಳಿ ಭಾಗದಲ್ಲಿ ನದಿಗಳ ಉದ್ದಕ್ಕೂ ವೈಜ್ಞಾನಿಕವಾಗಿ ದಂಡೆ ನಿರ್ಮಾಣ ಮಾಡಿ ಉಪ್ಪು ನೀರು ಮಾತ್ರವಲ್ಲದೇ ಲವಣಾಂಶ ಕೃಷಿ ಭೂಮಿಗೆ ಹೋಗದಂತೆ ತಡೆಯುವ ವಿಧಾನವೇ ಖಾರ್‌ಲ್ಯಾಂಡ್‌. 1,500 ಕೋ.ರೂ. ವೆಚ್ಚದಲ್ಲಿ ಇದಕ್ಕೆ ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಿ 2021-22ರಲ್ಲಿ ಉತ್ತರ ಕನ್ನಡದಲ್ಲಿ ಪ್ರಥಮ ಬಾರಿಗೆ ಅನುಷ್ಠಾನ ಮಾಡಲಾಗಿತ್ತು. 2022-23ರಲ್ಲಿ ಉಡುಪಿ, ದ.ಕ. ಜಿಲ್ಲೆಗೂ ವಿಸ್ತರಿಸಲಾಗಿತ್ತು. ಉಭಯ ಜಿಲ್ಲೆಗೆ 50 ಕೋಟಿ ರೂ. ಮಂಜೂರು ಮಾಡಲಾ ಗಿತ್ತು. ಆದರೆ ಯೋಜನೆ ಮಾತ್ರ ಕುಂಟುತ್ತಾ ಸಾಗುತ್ತಿದೆ.

ಅನುದಾನ ಬರುತ್ತಿಲ್ಲ
ದೊಡ್ಡ ಯೋಜನೆಯಾದರೂ ಮೀಸಲಿಟ್ಟ ಅನುದಾನ ಮಾತ್ರ ಬರುತ್ತಿಲ್ಲ. 2022-23ನೇ ಸಾಲಿಗೆ 300 ಕೋ.ರೂ. ಮೀಸಲಿಡಲಾಗಿತ್ತು. ಅದರಲ್ಲಿ ಉಡುಪಿ ಜಿಲ್ಲೆಗೆ 24 ಕೋಟಿ ಹಾಗೂ ದ.ಕ. ಜಿಲ್ಲೆಗೆ 26 ಕೋ.ರೂ. ಮೀಸಲಿಟ್ಟಿದ್ದರು. ಹಣಕಾಸಿನ ಕೊರತೆಯಿಂದ ಅನುದಾನ ಇನ್ನೂ ಬಂದಿಲ್ಲ. ಹೀಗಾಗಿ ತಾಂತ್ರಿಕ ಕಾರಣದಿಂದ ಕಾರ್ಯಾರಂಭವಾಗಿಲ್ಲ. ಕೆಲವು ಕಡೆಗಳಲ್ಲಿ ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ.

Advertisement

ಕೃಷಿಕರಿಗೆ ಈ ಬಾರಿಯೂ ಹೊಡೆತ
ಖಾರ್‌ಲ್ಯಾಂಡ್‌ ಯೋಜನೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಂಡಿದ್ದರೆ ಈ ಬಾರಿ ಕರಾವಳಿ ಭಾಗದ ಹೆಚ್ಚಿನ ರೈತರಿಗೆ ಅನುಕೂಲವಾಗುತಿತ್ತು. ಕಾಮಗಾರಿ ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಉಪ್ಪುನೀರು ಕೃಷಿ ಭೂಮಿಗೆ ಹತ್ತಿ ಮುಂಗಾರು ಅನಂತರದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ನೆರೆಯಿಂದ ಭತ್ತದ ಕೃಷಿಗೂ ಹಾನಿಯಾಗಿದೆ. ಸರಕಾರ ಯೋಜನೆ ಘೋಷಣೆ ಮಾಡಿದರೆ ಸಾಲದು ಅನುಷ್ಠಾನವೂ ಅಷ್ಟೇ ವೇಗವಾಗಿ ಮಾಡಬೇಕು ಎಂಬುದು ಕೃಷಿಕರ ಆಗ್ರಹ.

ಎಲ್ಲೆಲ್ಲಿ ಯೋಜನೆ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಿತ್ರೋಡಿ, ಉಡುಪಿ ತಾಲೂಕಿನ ಮೂಡು ತೋನ್ಸೆ, ಅಂಬಲಪಾಡಿಯ ಸಂಕೇಶ್‌ದಡ್ಡಿ, ಹಾರಾಡಿಯ ಕಂಬಳಕಟ್ಟಿ, ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನ, ಕೋಡಿ ಬೆಂಗ್ರೆ ಸೀತಾನದಿಯ ಆಯ್ದಭಾಗ, ಕುಂದಾಪುರ ತಾಲೂಕಿನ ಟಿ.ಟಿ. ರಸ್ತೆಯ ಕೈಪಾಡಿ ಗರಡಿ, ಹೆಮ್ಮಾಡಿ ಗ್ರಾಮದ ಸಂತೋಷನಗರ ಬುಗರಿಕಡು, ತಲ್ಲೂರು ಗ್ರಾಮದ ಸಂಸಾಲ್‌ ಕಡು, ಬೈಂದೂರು ತಾಲೂಕಿನ ಹಕ್ಲಾಡಿ ಗ್ರಾಮದ ಬಗ್ವಾಡಿ, ತೊಪುÉ, ತ್ರಾಸಿ ಗ್ರಾಮದ ಕಲ್ಲಾನಿ ಶಾಲೆ ಹಿಂಭಾಗ, ಹೊಸಾಡು ಗ್ರಾಮದ ಅರಾಟೆ, ಮಯ್ನಾಡಿ, ಕೊಡೇರಿ ಕಂಬಳಗದ್ದೆ. ದ.ಕ. ಜಿಲ್ಲೆಯ ಮೂಲ್ಕಿ, ಉಳ್ಳಾಲ, ಮಂಗಳೂರು ದಕ್ಷಿಣ ಹಾಗೂ ಉತ್ತರದಲ್ಲಿ ತಲಾ ಒಂದೊಂದು ಕಾಮಗಾರಿ.

5 ಕಡೆ ಆರಂಭವಾಗಿಲ್ಲ
ಉಡುಪಿ ಜಿಲ್ಲೆಯ11 ಕಡೆ ಕಾಮ ಗಾರಿಗೆ ಅನುಮೋದನೆ ಲಭಿಸಿದ್ದು 7 ಕಡೆ ಆರಂಭವಾಗಿದೆ. 4 ಕಡೆ ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ 4 ಕಡೆ ಕಾಮಗಾರಿಗೆ ಅನುಮೋದನೆ ಲಭಿಸಿದ್ದು 3 ಕಡೆ ಆರಂಭವಾಗಿದೆ. 1 ಕಡೆ ಬಾಕಿ ಇದೆ. ಕಾಮಗಾರಿ ಆರಂಭವಾಗಿರುವಲ್ಲೂ ಸರಿಯಾಗಿ ನಡೆಯುತ್ತಿಲ್ಲ. ಆರಂಭಿಕ ಹಂತದಲ್ಲೇ ಇರುವುದರಿಂದ ಕನಿಷ್ಠ 3ರಿಂದ 4 ವರ್ಷ ಅಗತ್ಯವಿದೆ ಎನ್ನುತ್ತವೆ ಮೂಲಗಳು.

ಕರಾವಳಿ ಪ್ರದೇಶದ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗದಂತೆ ಖಾರ್‌ಲ್ಯಾಂಡ್‌ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅನುದಾನ ಲಭ್ಯತೆಯ ಆಧಾರದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗುವುದು.
– ಎನ್‌.ಎಸ್‌. ಭೋಸರಾಜು, ಸಣ್ಣ ನೀರಾವರಿ ಸಚಿವ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next