Advertisement

ಕರ್ನಾಟಕ ಭವನದಲ್ಲಿ ಸಾಹಿತಿಗಳ ಗದ್ದಲ!

12:21 AM Feb 08, 2019 | Team Udayavani |

ಬೆಂಗಳೂರು: ಪ್ರಾದೇಶಿಕ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತೆರಳಿದ್ದ ರಾಜ್ಯದ ಸಾಹಿತಿಗಳ ನಿಯೋಗದ ಸದಸ್ಯರ ಪೈಕಿ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದವರು ಬುಧವಾರ ತಡರಾತ್ರಿವರೆಗೂ ಪಾರ್ಟಿ ಮಾಡಿ, ಜೋರಾಗಿ ಹರಟೆ ಹೊಡೆದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಿರಿ ಕಿರಿ ಉಂಟು ಮಾಡಿದ್ದಾರೆ ಎನ್ನಲಾದ ಪ್ರಹಸನ ಜರುಗಿದೆ.

Advertisement

ಮತ್ತೂಂದೆಡೆ, ಘಟನೆಗೆ ಸಂಬಂಧಿಸಿದಂತೆ ವಿವರಣಾ ವರದಿ ನೀಡುವಂತೆ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‌ ಭಾಸ್ಕರ್‌, ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್‌ ಮಿತಾಶ್‌ಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ‘ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದ ಸಾಹಿತಿಗಳು ಯಾವುದೇ ರೀತಿಯ ಪಾರ್ಟಿ ಮಾಡಿಲ್ಲ, ಗದ್ದಲವೂ ಮಾಡಿಲ್ಲ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ ಸಿದ್ದರಾಮಯ್ಯ ನೇತೃತ್ವದ ನಿಯೋಗದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್‌, ಕವಿ ಸಿದ್ದಲಿಂಗಯ್ಯ, ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಸೇರಿ ಹಲವರು ಇದ್ದರು.

ಘಟನೆ ಏನು?: ನಿಯೋಗದಲ್ಲಿದ್ದ ಸಾಹಿತಿಗಳು ಕರ್ನಾಟಕ ಭವನದಲ್ಲಿ ಬುಧವಾರ ರಾತ್ರಿ ತಂಗಿದ್ದರು. ಮೊದಲನೇ ಮಹಡಿಯ ಕೊಠಡಿಯಲ್ಲಿ ಉಳಿದುಕೊಂಡಿದ್ದ ಕೆಲ ಸಾಹಿತಿಗಳ ಹರಟೆ ಹಾಗೂ ಗದ್ದಲ ತಡರಾತ್ರಿಯವರೆಗೂ ಮುಂದುವರಿದಿದೆ. ಈ ಗದ್ದಲದಿಂದ ಪಕ್ಕದ ಕೊಠಡಿಯಲ್ಲಿ ತಂಗಿದ್ದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರಿಗೆ ಇನ್ನಿಲ್ಲದ ಕಿರಿಕಿರಿ ತರಿಸಿದೆ ಎನ್ನಲಾಗಿದೆ. ಸಾಹಿತಿಗಳ ಅನಗತ್ಯ ಗದ್ದಲದಿಂದ ಬೇಸತ್ತು, ಗಲಾಟೆ ಮಾಡದಂತೆ ಹೇಳಲು ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಭದ್ರತಾ ಸಿಬ್ಬಂದಿ ಸಾಹಿತಿಗಳ ಕೊಠಡಿಗೆ ತೆರಳಿ ಗದ್ದಲ ನಡೆಸದಂತೆ ಹೇಳಿದರೂ ಪ್ರಯೋಜನಕ್ಕೆ ಬರಲಿಲ್ಲ. ಸಾಹಿತಿಗಳ ಜೋರು ಮಾತು ಸಾಗಿತ್ತು ಎನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡ ನ್ಯಾ.ದಿನೇಶ್‌ ಮಾಹೇಶ್ವರಿ, ಸ್ವಾಗತಕಾರರ ಪಡಸಾಲೆಗೆ ಬಂದು ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ 12 ಮಂದಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕರ್ನಾಟಕ ಭವನದ ಮುಖ್ಯದ್ವಾರ ಬಂದ್‌ ಮಾಡಿ, ಸಾಹಿತಿಗಳಿದ್ದ ಕೊಠಡಿಗೆ ತೆರಳಿ ಗದ್ದಲ ಮುಂದುವರಿಸಿದರೆ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ವಿಷಯ ತಿಳಿದ ಕೂಡಲೇ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್‌ ಮಿತಾಶ್‌ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.

ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ

ಘಟನೆ ಕುರಿತಂತೆ ಉದಯವಾಣಿ ಜತೆ ಮಾತನಾಡಿದ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ ಸಿದ್ದರಾಮಯ್ಯ, ‘ಕರ್ನಾಟಕ ಭವನದ ಮೂರನೇ ಮಹಡಿಯ ಕೊಠಡಿಯಲ್ಲಿ ನಾನು ತಂಗಿದ್ದೆ. ಕೆಲವು ಸಾಹಿತಿ ಸ್ನೇಹಿತರು ಮೊದಲನೇ ಮಹಡಿಯಲ್ಲಿ ತಂಗಿದ್ದರು. ಸ್ಥಳೀಯ ಸ್ನೇಹಿತರ ಜತೆ ತಮಾಷೆಯಾಗಿ ಮಾತನಾಡಿ ಕೆಲಹೊತ್ತು ಹರಟೆ ನಡೆಸಿರಬಹುದು. ಇದರಿಂದ ನ್ಯಾಯಮೂರ್ತಿಗಳಿಗೆ ಕಿರಿಕಿರಿಯಾಗಿದೆ. ಹೀಗಾಗಿ, ಅವರ ಭದ್ರತಾ ಸಿಬ್ಬಂದಿ ಬಂದು ಸೂಚಿಸಿದ್ದಾರೆ. ಹಿಂದಿಯಲ್ಲಿ ಅವರು ಹೇಳಿದ್ದರಿಂದ ಇವರಿಗೆ ಸರಿಯಾಗಿ ಅರ್ಥವಾಗಿಲ್ಲ. ವಿಷಯ ತಿಳಿದ ಕೂಡಲೇ ಧಾವಿಸಿ ಅವರನ್ನು ಸಮಾಧಾನ ಮಾಡಿದೆ, ಬಳಿಕ ನ್ಯಾಯಮೂರ್ತಿಗಳ ಬಳಿ ತೆರಳಿ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದೆ. ನ್ಯಾಯಮೂರ್ತಿಗಳು, ಪರವಾಗಿಲ್ಲ. ನಿಮ್ಮ ಬಗ್ಗೆ ಗೊತ್ತಿದೆ ಎಂದು ಪ್ರೀತಿಯಿಂದಲೇ ಮಾತನಾಡಿಸಿ ಕಾಫಿ ನೀಡಿ ಕಳುಹಿಸಿಕೊಟ್ಟರು. ಗುರುವಾರ ಬೆಳಿಗ್ಗೆಯೂ ನ್ಯಾಯಮೂರ್ತಿಗಳ ಬಳಿ ತೆರಳಿ ವಿಷ್‌ ಮಾಡಿದಾಗ ಘಟನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿ ಕಳುಹಿಸಿದರು. ಆದರೆ, ಈ ವಿಷಯವನ್ನು ಅನಗತ್ಯವಾಗಿ ಎಳೆದಾಡಲಾಗುತ್ತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next