ಬೀಜಿಂಗ್: ನಿರುದ್ಯೋಗ ಮತ್ತು ಹತಾಸೆಯಿಂದ ಆಕ್ರೋಶಗೊಂಡ ಯುವಕನೊಬ್ಬ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿರುವ ಘಟನೆ ಪೂರ್ವ ಚೀನಾದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ
ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಹುಯೈನಿಂಗ್ ಕೌಂಟಿಯ 25ವರ್ಷದ ನಿರುದ್ಯೋಗಿ ಯುವಕ ತನ್ನ ಕೋಪವನ್ನು ಹೊರಹಾಕಲು ಶನಿವಾರ (ಜೂನ್ 05) ನಾಗರಿಕರ ಮೇಲೆ ಚೂರಿಯಿಂದ ಇರಿದು ದಾಳಿ ನಡೆಸಿದ್ದಾನೆ ಎಂದು ಆ್ಯಕ್ವಿಂಗ್ ನಗರದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬದ ಸಮಸ್ಯೆ ಮತ್ತು ಹತಾಶೆಗೊಳಗಾಗಿದ್ದ ಯುವಕ ಈ ಕೃತ್ಯ ಎಸಗಿರುವುದಾಗಿ ಮುನ್ಸಿಪಲ್ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಚೂರಿ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದರು. ಇದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಾಂಗ್ ಕಾಂಗ್ ಮೂಲದ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಹಲವಾರು ಪಾದಚಾರಿಗಳು ಗಾಯಗೊಂಡಿದ್ದು, ಅವರು ನಡೆದು ಹೋಗುತ್ತಿದ್ದ ದಾರಿಯಲ್ಲಾ ರಕ್ತದೋಕುಳಿಯಾಗಿತ್ತು ಎಂದು ವರದಿ ಹೇಳಿದೆ. ನಾಲ್ವರು ಪೊಲೀಸ್ ಅಧಿಕಾರಿಗಳು ಶಂಕಿತನನ್ನು ವಶಕ್ಕೆ ತೆಗೆದುಕೊಂಡು ಘಟನಾ ಸ್ಥಳದಿಂದ ಕರೆದೊಯ್ದಿರುವುದಾಗಿ ತಿಳಿಸಿದ್ದರು.