ದೇಶದಲ್ಲಿ ಹುಲಿಗಳ ಆವಾಸಕ್ಕೆ ಪ್ರಶಸ್ತವಾಗಿರುವ ಅರಣ್ಯಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅಗ್ರ ಪಂಕ್ತಿಯಲ್ಲಿದೆ. ಪರಿಸರ ವೈವಿಧ್ಯವುಳ್ಳ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಆಗಾಗ್ಗೆ ಈ ಅರಣ್ಯಕ್ಕೆ ಕಂಟಕವೆನಿಸುವ ಪ್ರಸ್ತಾವಗಳು ಬರುತ್ತಲೇ ಇರುತ್ತವೆ. ಈಗ ಬಂದಿರುವ ಹೊಸ ಕಂಟಕವೆಂದರೆ ಈ ಅರಣ್ಯದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 181 ಅನ್ನು ದ್ವಿಪಥವಾಗಿ ವಿಸ್ತರಿಸುವ ಪ್ರಸ್ತಾವ.
ರಾಷ್ಟ್ರೀಯ ಹೆದ್ದಾರಿ 181ರ (ಪೂರ್ವದಲ್ಲಿ ಎನ್‌ಎಚ್ 67) 504 ನೇ ಕಿ.ಮೀ.ನಿಂದ 517 ನೇ ಕಿ.ಮೀ. ವರೆಗೆ ಅಂದರೆ ಬಂಡೀಪುರ ಅರಣ್ಯ ಆರಂಭವಾಗುವ ಮೇಲುಕಾಮನಹಳ್ಳಿಯಿಂದ, ಬಂಡೀಪುರ ಅರಣ್ಯ ಅಂತ್ಯವಾಗುವ ಕೆಕ್ಕನಹಳ್ಳದವರೆಗಿನ (13.2 ಕಿ.ಮೀ. ಅಂತರ) ಈಗಿನ ಏಕಪಥ ರಸ್ತೆಯನ್ನು ದ್ವಿಪಥವಾಗಿ ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ವಿಭಾಗ ಪ್ರಕ್ರಿಯೆ ಆರಂಭಿಸಿದೆ.
ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿ ಯರ್ ಅವರು 2021ರ ಮೇ 29ರಂದು, ಮೈಸೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಪತ್ರ ಬರೆದು, ಬಂಡೀಪುರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವಾಗಿ ವಿಸ್ತರಿಸಲು 2021-22ನೇ ವಾರ್ಷಿಕ ಯೋಜನೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯಿಂದ ಯಾವುದೇ ಅಡಚಣೆ ಬಾರದಂತೆ ಅನುಮತಿ ಪಡೆಯಿರಿ ಎಂದು ಸೂಚಿಸಿದ್ದಾರೆ.
ಸದ್ಯ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧವಿದ್ದು ಇದನ್ನು ತೆರವುಗೊಳಿಸಬೇಕೆಂದು ಕೇರಳ ರಾಜ್ಯ ಹಲವಾರು ಒತ್ತಡಗಳನ್ನು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರದ ಮೇಲೆ ತಂದಿದೆ. ಒಂದು ಹಂತದಲ್ಲಿ ಈ ಅರಣ್ಯದ ಮಧ್ಯೆ ಕಾರಿಡಾರ್ ರಸ್ತೆ ನಿರ್ಮಿಸಬೇಕೆಂಬ ಪ್ರಸ್ತಾವವೂ ಕೇಳಿಬಂದಿದೆ. ಆದರೆ ರಾಜ್ಯ ಸರಕಾರ ಈ ಒತ್ತಡಗಳಿಗೆ ಮಣಿದಿಲ್ಲ. ಹೀಗಾಗಿ ಪ್ರಸ್ತುತ ಬಂಡೀಪುರ ಅರಣ್ಯದೊಳಗೆ ರಾತ್ರಿ ಸಂಚಾರ ನಿಷೇಧ ಮುಂದುವರಿದಿದೆ.
ಆದರೆ ಈಗ ಬಂದಿರುವ ಹೊಸ ಕಂಟಕ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ರಸ್ತೆ ವಿಸ್ತರಣೆಯ ಪ್ರಸ್ತಾವವೇನಾದರೂ ಕಾರ್ಯರೂಪಕ್ಕೆ ಬಂದಲ್ಲಿ 13 ಕಿ.ಮೀ. ದೂರದವರೆಗೂ ಅರಣ್ಯ ಪ್ರದೇಶ ರಸ್ತೆಯಾಗಿ ಮಾರ್ಪಡುತ್ತದೆ. ಅಲ್ಲದೇ ದ್ವಿಪಥ ರಸ್ತೆಯಾದಾಗ ವಾಹನಗಳು ಅತೀ ವೇಗ ವಾಗಿ ಸಂಚರಿಸುವುದರಿಂದ ರಸ್ತೆ ದಾಟುವ ವನ್ಯಜೀವಿಗಳು ಅಪಘಾತದಿಂದ ಮೃತಪಡುವ ಪ್ರಮಾಣ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
2017ರಲ್ಲಿ ನಡೆದ ಗಣತಿಯ ಪ್ರಕಾರ ಮಧ್ಯಪ್ರದೇಶದ ಅನಂತರ ಕರ್ನಾಟಕ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. (ಕೇವಲ ಎರಡೇ ಹುಲಿಗಳ ಅಂತರದಿಂದ ಕರ್ನಾಟಕ ಮೊದಲ ಸ್ಥಾನದಿಂದ ವಂಚಿತವಾಯಿತು) ಆಗಿನ ಗಣತಿಯ ಪ್ರಕಾರ ರಾಜ್ಯದಲ್ಲಿ 524 ಹುಲಿಗಳಿವೆ. ಈ 524ರಲ್ಲಿ ಬಂಡೀಪುರ ಅರಣ್ಯವೊಂದರಲ್ಲೇ 128 ಹುಲಿಗಳಿವೆ. ಗಣತಿ ನಡೆದು 5 ವರ್ಷಗಳಾಗಿದ್ದು ಪ್ರಸ್ತುತ ಬಂಡೀಪುರದಲ್ಲಿ 148 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.
1020 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಬಂಡೀಪುರ ಅರಣ್ಯದಲ್ಲಿ 2000ಕ್ಕೂ ಅಧಿಕ ಆನೆಗಳು, 300ಕ್ಕೂ ಹೆಚ್ಚು ಚಿರತೆಗಳಿವೆ. ಅಲ್ಲದೇ ಚುಕ್ಕೆ ಜಿಂಕೆ, ಸಾರಂಗ, ಸೀಳುನಾಯಿ, ಕಾಡೆಮ್ಮೆ, ನವಿಲು, ಹೆಬ್ಟಾವುಗಳು ಸೇರಿ ಹಲವು ಪ್ರಭೇದದ ಪ್ರಾಣಿ, ಪಕ್ಷಿಗಳಿವೆ. ಅಪರೂಪದ ಜೀವ ವೈವಿಧ್ಯ, ಹಲವಾರು ಸಸ್ಯ ಪ್ರಭೇದಗಳಿವೆ. ಇಂಥ ಅರಣ್ಯದೊಳಗಿನ ಜೀವ ವೈವಿಧ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯ. ರಾಜ್ಯ ಸರಕಾರ ಈ ರಸ್ತೆ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.