ಮಂಡ್ಯ: ಕೋವಿಡ್ ಸೋಂಕಿನಿಂದ ಕಳೆದ 6-7 ತಿಂಗಳಿನಿಂದ ಬಂದ್ ಆಗಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಪ್ರವಾಸೋದ್ಯಮ ಚೇತರಿಕೆಯತ್ತ ಸಾಗಿದೆ.
ಪ್ರಮುಖ ಪ್ರವಾಸಿ ತಾಣಗಳಾದ ಕೃಷ್ಣರಾಜ ಸಾಗರ ಜಲಾಶಯ ಬೃಂದಾವನ, ಜಲಾಶಯದ ಹಿನ್ನೀರು, ಪಕ್ಷಿಧಾಮ, ಕೊಕ್ಕರೆಬೆಳ್ಳೂರು, ಎಡಮುರಿ, ಬಲಮುರಿ, ಗಗನಚುಕ್ಕಿ ಜಲಪಾತ ಸೇರಿದಂತೆ ಕಾವೇರಿ ನದಿ ಹರಿಯುವ ಉದ್ದಕ್ಕೂ ಸಿಗುವ ಪಶ್ಚಿಮ ವಾಹಿನಿ, ಗೋಸಾಯಿಘಾಟ್, ಪಾಂಡವಪುರದ ಕೆರೆತೊಣ್ಣೂರುಜಲಾಶಯ ಸೇರಿದಂತೆ ನದಿ ತೀರದ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಪ್ರತಿದಿನ 300 ಮಂದಿ ಭೇಟಿ: ಪ್ರಸ್ತುತ ಕೆಆರ್‌ಎಸ್‌ಗೆ ಪ್ರತಿದಿನ 300-400 ಮಂದಿ ಭೇಟಿ ನೀಡುತ್ತಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಪ್ರತಿದಿನ 5ರಿಂದ 6 ಸಾವಿರ ಮಂದಿ ಭೇಟಿ ನೀಡುತ್ತಿದ್ದರು.ವಾರದ ರಜಾ ದಿನಗಳಲ್ಲಿ ಆ ಸಂಖ್ಯೆ 10 ಸಾವಿರಕ್ಕೇರುತ್ತಿತ್ತು. ಶ್ರೀರಂಗಪಟ್ಟಣದ ಪಕ್ಷಿಧಾಮಕ್ಕೆ ಲಾಕ್‌ಡೌನ್ ಮುಂಚೆ ಪ್ರತಿದಿನ 700ರಿಂದ 800 ಮಂದಿ ಭೇಟಿ ನೀಡುತ್ತಿದ್ದರು. ವಾರದ ರಜಾದಿನಗಳಲ್ಲಿ 3ರಿಂದ 4 ಸಾವಿರ ದಾಟುತ್ತಿತ್ತು. ಆದರೆ, ಈಗ ಕೇವಲ150 ಮಂದಿ ಭೇಟಿ ನೀಡುತ್ತಿದ್ದಾರೆ. ರಜಾ ದಿನಗಳಲ್ಲಿ ಆ ಸಂಖ್ಯೆ350ಕ್ಕೇರುತ್ತಿದೆ. ಅಲ್ಲದೆ, ಮಳವಳ್ಳಿಯ ಗಗನಚುಕ್ಕಿ ಜಲಪಾತಕ್ಕೆ ಪ್ರತಿದಿನ200 ಮಂದಿ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಲಾಕ್‌ಡೌನ್‌ಸಂದರ್ಭದಲ್ಲಿಯೇ ಹೆಚ್ಚು ಮಳೆಯಾಗಿದ್ದರಿಂದ ಜಲಪಾತ ವೈಭವ ಹೆಚ್ಚಾಗಿತ್ತು. ಆದರೆ, ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರಿಂದ ನೋಡಲು ಸಾಧ್ಯವಾಗಿರಲಿಲ್ಲ.
ಸರಳ ದಸರಾದಿಂದ ವಿರಳ: ಪ್ರತಿ ವರ್ಷ ದಸರಾ ಸಂದರ್ಭದ ದಿನಗಳಲ್ಲಿ ಪ್ರತಿದಿನ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಒಂದು ದಿನಕ್ಕೆ10 ಸಾವಿರಕ್ಕೂ ಹೆಚ್ಚು ಮಂದಿ ಕೆಆರ್ ಎಸ್, ಪಕ್ಷಿಧಾಮ, ಗಗನಚುಕ್ಕಿ ಸೇರಿದಂತೆ ವಿವಿಧ ಪ್ರವಾಸಿ ತಾಣ ಗಳಿಗೆ ಭೇಟಿ ನೀಡುತ್ತಿದ್ದರು. ಇದರಿಂದ ಕೋಟ್ಯಂತರ ರೂ. ಆದಾಯ ಬರುತ್ತಿತ್ತು. ಆದರೆ, ಈ ಬಾರಿ ಸರಳ ದಸರಾ ಆಚರಿಸಿದ್ದ ರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.
ದೇಗುಲಗಳಿಗೂ ಲಗ್ಗೆ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಿಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ, ಶ್ರೀನಿಮಿಷಾಂಭ, ಮೇಲುಕೋಟೆ ಸೇರಿದಂತೆ ಪುರಾಣ ಪ್ರಸಿದ್ಧ ದೇವಾಲಯಗಳಿಗೆ ಪ್ರವಾಸಿಗರು ಹಾಗೂಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರತಿದಿನ 200ರಿಂದ 300 ಮಂದಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದು,ರಜಾದಿನಗಳಲ್ಲಿ ಆ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ದೇವಾಲಯದ ವಿಶೇಷ ದಿನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿದೆ.
ಲಾಕ್‌ಡೌನ್ ಮೊದಲು 1.85ಲಕ್ಷ ಪ್ರವಾಸಿಗರ ಭೇಟಿ : ಲಾಕ್‌ಡೌನ್‌ಗೂ ಮೊದಲು ಕೆಆರ್‌ಎಸ್‌ಗೆ 1,85,536 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಅದರಲ್ಲಿ 1,85,301 ಭಾರತೀಯರು, 235 ವಿದೇಶಿಗರು ಭೇಟಿ ನೀಡಿದ್ದರು. ನಿತ್ಯ 5984 ಮಂದಿ ಪ್ರವಾಸಿಗರು ಆಗಮಿಸುತ್ತಿದ್ದರು. ಅದರಂತೆ ರಂಗನತಿಟ್ಟು ಪಕ್ಷಿಧಾಮಕ್ಕೆ ಲಾಕ್‌ಡೌನ್ ಮುಂಚೆ 33791 ಮಂದಿ ಭೇಟಿ ನೀಡಿದ್ದರು. ಕನಿಷ್ಠ 1062 ಮಂದಿ ಭೇಟಿ ನೀಡಿದ್ದಾರೆ. ಲಾಕ್‌ಡೌನ್ ತೆರವಿನ ನಂತರ ಆಗಸ್ಟ್‌ನಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅದರ ಮಾಹಿತಿ ಲಭ್ಯವಿಲ್ಲ. ಆದರೆ, ರಂಗನತಿಟ್ಟು ಪಕ್ಷಿಧಾಮಕ್ಕೆ 5766 ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ ಯಾವುದೇ ವಿದೇಶಿ ಪ್ರಜೆಗಳು ಭೇಟಿ ನೀಡಿಲ್ಲ. ಪ್ರಸ್ತುತ ಪ್ರತಿದಿನ 186 ಮಂದಿ ಭೇಟಿ ನೀಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಇದರಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.ಕೊರೊನಾ ಭೀತಿ ಇನ್ನೂ ಇರುವುದರಿಂದಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
–ಹರೀಶ್, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಮಂಡ್ಯ