Advertisement

ಸಾಲ ವಿತರಣೆಯಲ್ಲಿ ಜಿಲ್ಲೆಗೆ ಅಗ್ರ ಸ್ಥಾನ

04:44 PM May 11, 2022 | Team Udayavani |

ಬೆಳಗಾವಿ: ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಒದಗಿಸಬೇಕು. ಕೃಷಿ ಸಾಲ ಮಾತ್ರವಲ್ಲದೇ ಗೃಹ ಸಾಲ, ಬಂಗಾರ ಅಡಮಾನ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ಕಲ್ಪಿಸಬೇಕು. ವಾರ್ಷಿಕ ಗುರಿ ನಿಗದಿಪಡಿಸಿ ಅರ್ಹ ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು. ಇದರಿಂದ ಬ್ಯಾಂಕ್‌ ನಗದು ವಹಿವಾಟು ಗರಿಷ್ಠ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ತಿಳಿಸಿದರು.

Advertisement

ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಡಿಸಿಸಿ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್‌ ವತಿಯಿಂದ ಶೇ. 100ರಷ್ಟು ಗುರಿ ನಿಗದಿಪಡಿಸಿ ರೈತರಿಗೆ ಸಾಲ ಮಂಜೂರು ಮಾಡಬೇಕು. ರಾಜ್ಯದ 21 ಡಿಸಿಸಿ ಬ್ಯಾಂಕ್‌ನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರಿಗೆ ಸಾಲ ವಿತರಣೆ ಮಾಡಲಾಗಿದೆ. ಸಾಲ ವಿತರಣೆಗೆ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದರು. ಸಾಲ ವಿತರಣೆಗೆ ವಾರ್ಷಿಕ ಗುರಿ ನಿಗದಿಪಡಿಸಿ ಪ್ರಗತಿ ಸಾಧಿಸಬೇಕು. ಬಡ್ಡಿ ರಿಯಾಯಿತಿ ಯೋಜನೆ ಎಲ್ಲಾ ರೈತರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಹಾಗೂ ಡಿಸಿಸಿ ಬ್ಯಾಂಕ್‌ ನಿಂದ ಹೊಸ ರೈತರಿಗೆ ಸಾಲ ವಿತರಣೆ ಮಾಡಬೇಕು ಎಂದು ತಿಳಿಸಿದರು. ಕೋವಿಡ್‌ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ಪಾತ್ರ ಮಹತ್ವದ್ದಾಗಿದೆ. ಅಂತಹ ಸಂಕಷ್ಟ ಸಮಯದಲ್ಲಿ ಡಿಸಿಸಿ ಬ್ಯಾಂಕ್‌ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದೆ. ಕೋವಿಡ್‌ ರೋಗಿಗಳ ಅನುಕೂಲಕ್ಕಾಗಿ 2.50 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್‌ ವ್ಯವಹಾರಕ್ಕಾಗಿ ಬಳಸಲಾಗುತ್ತಿರುವ ಸಾಫ್ಟ್‌ ವೇರ್‌ ಬಳಕೆಯಲ್ಲಿ ಯಾವುದೇ ತೊಂದರೆ ಇದ್ದರೆ ತಕ್ಷಣ ಗಮನಕ್ಕೆ ತರಬೇಕು ಎಂದು ಸಚಿವ ಸೋಮಶೇಖರ್‌ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರು, ಬ್ಯಾಂಕ್‌ ವ್ಯವಹಾರದ ಸಾಫ್ಟ್‌ ವೇರ್‌ನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ಅಲ್ಪಾವಧಿ ಸಾಲ ಮನ್ನಾ

ಅಲ್ಪಾವಧಿಯ ಸಾಲ ಮನ್ನಾ ಯೋಜನೆಯಲ್ಲಿ 1 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಲಾಗುತ್ತಿದೆ. ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಉದ್ದೇಶ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಪ್ರಗತಿ ಸಾಧಿಸಲಾಗಿದೆ ಎಂದು ಸಚಿವ ಸೋಮಶೇಖರ ತಿಳಿಸಿದರು. ರಾಜ್ಯದಲ್ಲಿ ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸಾಲ ಸೌಲಭ್ಯ ಒದಗಿಸುವ ಕಾರ್ಯ ಆಡಳಿತ ಮಂಡಳಿ ಮಾಡಿದೆ. ಸಹಕಾರಿ ಕ್ಷೇತ್ರದಲ್ಲಿ ಸಹಯೋಗ ಭಾವನೆಯಿಂದ ಸಿಬ್ಬಂದಿಗಳು ಸಾರ್ವಜನಿಕರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

Advertisement

ಸಬ್ಸಿಡಿ ಸಾಲ ಮಂಜೂರು

ನಬಾರ್ಡ್‌ ನಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈತರಿಗೆ ಸೇರಿದಂತೆ ಸಾಮಾನ್ಯ ವರ್ಗದವರಿಗೂ ವಿವಿಧ ಸಬ್ಸಿಡಿ ಸಾಲ ನೀಡಲಾಗುವುದು. ಈ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಡಿಸಿಸಿ ಬ್ಯಾಂಕ್‌ ಸಾಲ ವಿತರಣೆಗೆ ಗುರಿ ನಿಗದಿ ಪಡಿಸಿ, ಅರ್ಹ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ತಿಳಿಸಿದರು.

ಗೃಹ ಸಾಲ ನೀಡಲು ಆದ್ಯತೆ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳನ್ನು ಡಿಸಿಸಿ ಬ್ಯಾಂಕ್‌ಗೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅದೇ ರೀತಿಯಲ್ಲಿ ಸ್ವ ಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ತಿಳಿಸಿದರು.

ಕೃಷಿ ಸಾಲ ಯೋಜನೆಯಲ್ಲಿ ಬರುವ ಅಲ್ಪಾವಧಿ ಸಾಲ, ಮಧ್ಯಮಾವಧಿ ಕೃಷಿ ಸಾಲ, ವಾಹನ ಸಾಲ, ಗೃಹೋಪಯೋಗಿ ಸಾಲ, ಬಂಗಾರ ಸಾಲ, ಸಿಬ್ಬಂದಿ ಗೃಹ ಸಾಲ, ಗೃಹ ಸಾಲ (ಜನರಲ್‌), ವೇತನ ಸಾಲ ಹಾಗೂ ಗೃಹ ಅಡಮಾನ ಸಾಲಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇದರಿಂದ ಬ್ಯಾಂಕ್‌ ವ್ಯವಹಾರ, ವಹಿವಾಟು ಹೆಚ್ಚಾಗಲಿದೆ ಎಂದು ಸಚಿವ ಸೋಮಶೇಖರ ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಸಹಕಾರ ಇಲಾಖೆಯ ಅಪರ ನಿಬಂಧಕ ದಿವಾಕರ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next