Advertisement

ಗಣಿತದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವೀಕ್‌!

09:48 PM Jan 20, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫ‌ಲಿತಾಂಶವನ್ನು ಕಳೆದ ಬಾರಿಗಿಂತ ರಾಜ್ಯ ಕ್ರಮಾಂಕದಲ್ಲಿ ಹೆಚ್ಚು ಸ್ಥಾನ ಪಡೆದು ಕನಿಷ್ಠ ಶೇ.90 ರಷ್ಟು ಸಾಧಿಸುವ ಗುರಿ ಹೊಂದಿರುವ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಈಗ ಗಣಿತ ವಿಷಯದ್ದೇ ಚಿಂತೆಯಾಗಿದೆ.

Advertisement

ಹೌದು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿರುವ ಸಾಧನಾ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಸುಮಾರು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವುದು ಇಲಾಖೆಯನ್ನು ಚಿಂತೆಗೀಡು ಮಾಡಿದೆ.

1700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್‌: ಜಿಲ್ಲೆಯಲ್ಲಿ ಒಟ್ಟು ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳ ಪೈಕಿ 3,478 ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಎಂದು ಗುರುತಿಸಲಾಗಿತ್ತು. ಆ ಪೈಕಿ 3,179 ಮಕ್ಕಳಿಗೆ 25 ಅಂಕಗಳಿಗೆ ಸಾಧನಾ ಪರೀಕ್ಷೆ ಆಯೋಜಿಸಲಾಗಿತ್ತು. ಆದರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಸುಮಾರು 1700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡಿರುವುದು ಪರೀಕ್ಷೆಯ ಫ‌ಲಿತಾಂಶ ಸಾಕ್ಷೀಕರಿಸಿದೆ.

ಒಟ್ಟು 3,179 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ ಕನ್ನಡದಲ್ಲಿ 1,840 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.59 ಫ‌ಲಿತಾಂಶ ಬಂದಿದೆ. ಅದೇ ರೀತಿ ಇಂಗ್ಲಿಷ್‌ನಲ್ಲಿ 1,576 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.51 ಫ‌ಲಿತಾಂಶ ಬಂದರೆ, ಹಿಂದಿಯಲ್ಲಿ ಶೇ.61 ರಷ್ಟು ಫ‌ಲಿತಾಂಶ ಬಂದಿದ್ದು, 1,877 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನದಲ್ಲಿ 1578 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.54 ಫ‌ಲಿತಾಂಶ ಬಂದರೆ, ಸಮಾಜದಲ್ಲಿ ಶೇ.56 ರಷ್ಟು ಫ‌ಲಿತಾಂಶ ಬಂದು 1603 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

25 ಅಂಕಗಳಿಗೆ ಪರೀಕ್ಷೆ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶವನ್ನು ಗುಣಾತ್ಮಕವಾಗಿ ಹೆಚ್ಚು ಮಾಡಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಶೈಕ್ಷಣಿಕ ಕಾರ್ಯ ಪಡೆ ರಚಿಸಿಕೊಂಡು ಹಲವು ನುರಿತ ಶಿಕ್ಷಣ ತಜ್ಞರನ್ನು ಸೇರ್ಪಡೆ ಮಾಡಿಕೊಂಡು ಜಿಲ್ಲೆಯಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿರುವ ಶಿಕ್ಷಣ ಇಲಾಖೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕೇವಲ 25 ಅಂಕಗಳಿಗೆ ಮಾತ್ರ ಸಾಧನಾ ಪರೀಕ್ಷೆ ನಡೆಸಿತ್ತು. ಆದರೆ ಗಣಿತ ವಿಷಯ ಹೊರತುಪಡಿಸಿದರೆ ಉಳಿದ ಕನ್ನಡ, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದರೂ ಗಣಿತದಲ್ಲಿ 1700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣವಾಗಿರುವುದು ಕಂಡು ಬಂದಿದೆ.

Advertisement

ಶಾಲಾ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿದ್ದತೆ: ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಿìಣಗೊಳಿಸುವ ನಿಟ್ಟಿನಲ್ಲಿ ಸವಾಲಾಗಿ ತೆಗೆದುಕೊಂಡಿರುವ ಶಿಕ್ಷಣ ಇಲಾಖೆ, ಈಗಾಗಲೇ ಅಂತಹ ಮಕ್ಕಳಿಗೆ ವಿಶೇಷ ಪಠ್ಯ ಕ್ರಮಗಳನ್ನು ವಿಷಯವಾರು ಸಿದ್ಧಪಡಿಸಿ ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಗೆ ಕ್ರಮ ಕೈಗೊಂಡಿದೆ. ಪರೀಕ್ಷೆಗೆ ಇನ್ನೂ ಒಂದೂವರೆ ತಿಂಗಳು ಮಾತ್ರ ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಲ್ಲಿ ವಾಸ್ತವ್ಯ ಹೂಡಲು ಸಜ್ಜಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸಹ ಹಲವು ಶಾಲೆಗಳಲ್ಲಿ ವಾಸ್ತವ್ಯ ಹೂಡಲು ಸಜ್ಜಾಗಿದ್ದಾರೆ.

ಸಾಧನಾ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಬುಧವಾರ ಶಿಕ್ಷಣ ಇಲಾಖೆಯ ಸಭೆ ಕರೆದಿದ್ದು ಈ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫ‌ಲಿತಾಂಶ ಪಡೆಯಲು ಕ್ರಮ ವಹಿಸಲಾಗುವುದು.
-ಬಿ.ಫೌಜಿಯಾ ತರುನ್ನುಮ್‌, ಜಿಪಂ ಸಿಇಒ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next