ತುಮಕೂರು: ಇಡೀ ರಾಜ್ಯದಲ್ಲಿಯೇ ಕೋವಿಡ್ -19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆ ಸಮರ್ಥವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಿದ್ಧ ನಡೆದಿದ್ದು ಮಂಗಳವಾರ ಪರೀಕ್ಷಾ ಕೇಂದ್ರಗಳಿಗೆ ತುಮಕೂರು ಪಾಲಿಕೆ ಮೇಯರ್ ಫರೀದಾ ಬೇಗಂ ಮತ್ತು ಡಿಡಿಪಿಐ ಎಂ.ಆರ್ ಕಾಮಾಕ್ಷಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯಲ್ಲಿ ಜೂ.25 ರಿಂದ ಜು.4ರವರೆಗೆ ತುಮಕೂರು ದಕ್ಷಿಣ ಶೈಕ್ಷಣಿಕ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಒಟ್ಟು 144 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧ ನಡೆಸಿದೆ.
ಪರೀಕ್ಷೆಗೆ 37306 ವಿದ್ಯಾರ್ಥಿಗಳು ನೋಂದಣಿ: ತುಮಕೂರು ಶೈಕ್ಷಣಿಕ ಜಿಲ್ಲೆಯ 23783 ಹಾಗೂ ಮಧುಗಿರಿಯ 13523 ಸೇರಿದಂತೆ ಒಟ್ಟು 37306 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಈ ಪೈಕಿ ಜಿಲ್ಲೆಯ 20329 ಬಾಲಕರು ಹಾಗೂ 16977 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.
144 ಪರೀಕ್ಷಾ ಕೇಂದ್ರ: ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ತುಮಕೂರಿನ 85 ಹಾಗೂ ಮಧುಗಿರಿಯ 59 ಸೇರಿದಂತೆ ಒಟ್ಟು 144 ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸ್ಯಾನಿಟೈ ಜೇಷನ್‌ಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಅವಕಾಶ: ವಿದ್ಯಾರ್ಥಿಗಳಿಗೆ ಕೊಠಡಿ ಹಂಚಿಕೆ ಮತ್ತು ಕಟ್ಟಡಗಳ ಮಾಹಿತಿ ಯನ್ನು ಸಂಬಂಧಿಸಿದ ಶಾಲೆಗಳ ಮೂಲಕ ಒಂದು ದಿನ ಮುಂಚಿತವಾಗಿ ತಿಳಿಸಲಾಗು ವುದು. ಕೊಠಡಿ ಹಂಚಿಕೆಯ ಬಗ್ಗೆ ಜೂನ್ 24ರಂದು ಮುಂಜಾಗ್ರತೆಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ನೋಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ಅವಕಾಶ ನೀಡಲಾಗಿದೆ.
ಪರೀಕ್ಷೆಗೆ ಮುನ್ನ ಅಧ್ಯಯನಕ್ಕೆ ಅವಕಾಶ: ಪರೀಕ್ಷೆಯು ನಿಗದಿತ ದಿನಾಂಕದಂದು ಬೆಳಗ್ಗೆ 10.30 ರಿಂದ ಆರಂಭವಾಗಲಿದ್ದು, ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಬೆಳಗ್ಗೆ 8.30 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸಿದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ 9.45ರವರೆಗೆ ಅಧ್ಯಯನ ಮಾಡಿಕೊಳ್ಳಲು ಅವಕಾಶವಿದ್ದು, 9.45ರ ನಂತರ ಕಡ್ಡಾಯವಾಗಿ ಪುಸ್ತಕ ಗಳನ್ನು ಕೊಠಡಿಯ ಹೊರಗೆ ನಿಗದಿಪಡಿಸಿದ ಜಾಗದಲ್ಲಿಡಬೇಕು.
ವಿದ್ಯಾರ್ಥಿಗಳ ಗಮನಕ್ಕೆ: ಸಮಸ್ಯೆಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಕರೆ ಮಾಡಬಹುದಾಗಿದ್ದು, ದೂರವಾಣಿ ಸಂಖ್ಯೆ ಇಂತಿದೆ. ಚಿಕ್ಕನಾಯಕನಹಳ್ಳಿ- 94806 95352, ಗುಬ್ಬಿ-9480695353, ಕುಣಿಗಲ್ – 9480695355, ತಿಪಟೂರು- 948069 5359, ತುಮಕೂರು- 9480695360, ತುರುವೇಕೆರೆ- 9480695361, ಕೊರಟಗೆರೆ – 9480695354, ಮಧುಗಿರಿ- 94806 95356, ಪಾವಗಡ-9480695357, ಶಿರಾ- 9480695358. ಅದೇ ರೀತಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ತುಮಕೂರು ಡಿ.ಡಿ.ಪಿ.ಐ ದೂ.ಸಂ.-9448999352, ಮಧುಗಿರಿ ಡಿಡಿಪಿಐ-9448999347, ತುಮಕೂರು ಶಿಕ್ಷಣಾಧಿಕಾರಿ-9449126869, ಮಧುಗಿರಿ ಶಿಕ್ಷಣಾಧಿಕಾರಿ – 9880541556 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ. ಆರ್.ಕಾಮಾಕ್ಷಿ ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಉತ್ತಮವಾಗಿ ನಡೆಸಲು ಎಲ್ಲಾ ತಯಾರಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಪೋಷಕರು ಮತ್ತು ಸಾರ್ವಜನಿಕರು ಕೈಜೋಡಿಸುವ ಮೂಲಕ ಸರಾಗವಾಗಿ ಪರೀಕ್ಷೆ ನಡೆಯಲು ಸಹಕರಿಸಬೇಕು.
-ಎಂ.ಆರ್.ಕಾಮಾಕ್ಷಿ, ಡಿಡಿಪಿಐ, ತುಮಕೂರು