Advertisement

ಜಿಲ್ಲಾಸ್ಪತ್ರೆ ರೋಗಿಗಳು ಖಾಸಗಿಗೆ: ಸರಕಾರ ಆದೇಶ

01:39 AM Mar 30, 2020 | Sriram |

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳನ್ನು ಕೋವಿಡ್-19 ಸೋಂಕಿತರು ಹಾಗೂ ಶಂಕಿತರಿಗಾಗಿಯೇ ಮೀಸಲಿಡುವ ನಿಟ್ಟಿನಲ್ಲಿ ಸದ್ಯ ಜಿಲ್ಲಾಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ಎಲ್ಲ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸರಕಾರ ಆದೇಶ ಹೊರಡಿಸಿದೆ.

Advertisement

ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ರೋಗಿಗಳನ್ನು ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ’ (ಎಬಿ-ಎಆರ್‌ಕೆ ) ಯೋಜನೆಯಡಿ ನೋಂದಣಿಯಾಗಿರುವ ಆಯಾ ಜಿಲ್ಲಾ ಖಾಸಗಿ ಆಸ್ಪತ್ರೆಗಳಿಗೆ ವಿಶೇಷ ಪ್ರಕರಣ ಎಂದು ಸ್ಥಳಾಂತರಿಸಬೇಕು. ಮುಂದಿನ ಆದೇಶದವರೆಗೆ ಅಲ್ಲಿಯೇ ಚಿಕಿತ್ಸೆ ಮುಂದುವರೆಯಲಿದ್ದು, ಎಬಿ-ಎಆರ್‌ಕೆ ಅಡಿ ಹಣ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ಸೂಚನೆ ನೀಡಿದ್ದಾರೆ.

ಜತೆಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಪರ್ಯಾಯವಾಗಿ ಆಯ್ಕೆ ಮಾಡಿರುವ ಖಾಸಗಿ ಆಸ್ಪತ್ರೆಗಳೊಗೆ ರೋಗಿಗಳು ರೆಫರಲ್‌ ವ್ಯವಸ್ಥೆ ಇಲ್ಲದೆ ನೇರವಾಗಿ ಹೋಗಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇನ್ನಷ್ಟು ತುರ್ತು ಅಗತ್ಯವಿದ್ದಾಗ ಸುವರ್ಣ ಆರೋಗ್ಯ ಟ್ರಸ್ಟ್‌ನ ನಿಯಮಾವಳಿ ಸಡಿಲಿಸಿ ಆದರೂ ಇತರ ಖಾಸಗಿ ಆಸ್ಪತ್ರೆಗಳಿಗೂ ಆಯುಷ್ಮಾನ್‌ ಭಾರತ್‌ ಅಡಿ ನೋಂದಣಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಜಿಲ್ಲಾಸ್ಪತ್ರೆಗಳಲ್ಲಿನ ರೋಗಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ ಅಲ್ಲಿ ಕೋವಿಡ್-19 ಪೀಡಿತರು ಮತ್ತು ಕೋವಿಡ್-19 ಶಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next