Advertisement

ಜಿಲ್ಲೆಗೆ ಬೇಕಿದೆ ಶಾಶ್ವತ ನೀರಾವರಿ ಯೋಜನೆ

05:05 PM Feb 14, 2018 | Team Udayavani |

ಚಿಕ್ಕಬಳ್ಳಾಪುರ: ಬಯಲು ಸೀಮೆ ಬರ ಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಬಾರಿ ಬಜೆಟ್‌ನಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಕಾಯಕಲ್ಪ ನೀಡುತ್ತಾ? ಜಿಲ್ಲೆಗೆ ಸಮಗ್ರ ನೀರಾವರಿ ಒದಗಿಸುವ ಜಿ.ಎಸ್‌. ಪರಮ ಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆ ಗಳಿಗೆ ಗ್ರೀನ್‌ ಸಿಗ್ನಲ್‌ ಕೊಡುತ್ತಾ? ಜಿಲ್ಲೆಯ ಜೀವಾಳವಾಗಿರುವ ಕೆರೆ, ಕುಂಟೆಗಳ ಪುನಶ್ಚೇ ತನಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸುತ್ತಾ?

Advertisement

ರಾಜ್ಯ ಸರ್ಕಾರದ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾದಂತೆ ಜಿಲ್ಲೆಯ ಜನರ ನಿರೀಕ್ಷೆಗಳು ಕೂಡ ಗರಿಗೆದರಿವೆ. ಪ್ರತಿ ವರ್ಷ ಬಜೆಟ್‌ ಮಂಡನೆ ವೇಳೆ ಜಿಲ್ಲೆಯ ಜನತೆ ಅತ್ಯಂತ ಕಾತುರದಿಂದ ಜಿಲ್ಲೆಗೆ ಏನಾದರೂ ಶಾಶ್ವತ ಸಮಗ್ರ ನೀರಾವರಿ ಒದಗಿಸು ವಂತಹ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆ ಆಗಿವೆಯೇ ಎಂಬುದನ್ನು ಎದುರು ನೋಡುತ್ತಿದ್ದಾರೆ. ಫೆ.16ಕ್ಕೆ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಈ ಬಾರಿಯಾದರೂ ನೀರಾವರಿ ವಂಚಿತ ಬರದ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಔರ್ದಾಯ ತೋರುತ್ತಾ ಎಂಬುದನ್ನು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.

ಅಂತರ್ಜಲ ಕುಸಿತ: ಜಿಲ್ಲೆಯಲ್ಲಿ ಯಾವುದೇ ಶಾಶ್ವತವಾದ ನದಿ, ನಾಲೆಗಳು ಇಲ್ಲದೇ ಮಳೆ ಹಾಗೂ ಕೊಳವೆ ಬಾವಿಗಳನ್ನು ಅಶ್ರಯಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಅವಲಂಬಿಸಬೇಕಿದೆ. ಆದರೂ ಇತ್ತೀಚೆಗೆ ಆರೇಳು ವರ್ಷಗಳಿಂದ ಸತತವಾಗಿ ಕಾಡುತ್ತಿರುವ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದು ಕೊಳವೆ ಬಾವಿಗಳು ಸಹ ಬತ್ತಿ ಹೋಗಿವೆ. ಕೃಷಿ, ಹೈನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದ್ದು, ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತಾಪಿ ಕೃಷಿ ಕೂಲಿ ಕಾರ್ಮಿಕರು ದಶಕಗಳಿಂದಲೂ ಬರಗಾಲಕ್ಕೆ ತತ್ತರಿಸಿ ಶಾಶ್ವತ ನೀರಾವರಿ ಯೋಜನೆಗಳ ಕಡೆಗೆ ಎದುರು ನೋಡುವಂತಾಗಿದೆ.

ಜಿಲ್ಲೆಗೆ ಎತ್ತಿನಹೊಳೆ ಹರಿಯಲಿಲ್ಲ: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ ನಲ್ಲಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಿಲ್ಲ. ಎತ್ತಿನಹೊಳೆ, ಹೆಬ್ಟಾಳ-ನಾಗವಾರ ಯೋಜನೆಗಳಂತಹ ತಾತ್ಕಲಿಕ ನೀರಾವರಿ ಯೋಜನೆಗಳಿಗೆ ಒಂದಿಷ್ಟು ಅನುದಾನ ಘೋಷಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಆದರೆ, 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಿರುವ ಎತ್ತಿನ ಹೊಳೆ ಯೋಜನೆ ನಾಲ್ಕೈದು ವರ್ಷ ಕಳೆದರೂ ಅಪೂರ್ಣಗೊಂಡಿದೆ. ಇನ್ನೂ ಎತ್ತಿನಹೊಳೆಯಿಂದ ಜಿಲ್ಲೆಗೆ ನೀರು ಹರಿಯುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಯೋಜನೆ ರೂವಾರಿ ಸಂಸದ ಎಂ. ವೀರಪ್ಪ ಮೊಯ್ಲಿ ಮಾತ್ರ ಒಂದರೆಡು ವರ್ಷದಲ್ಲಿ ಎತ್ತಿನಹೊಳೆ ನೀರು ಜಿಲ್ಲೆಗೆ ಬಂದೇ ಬರುತ್ತದೆ ಎಂಬ ಭರವಸೆ ನೀಡುತ್ತಿದ್ದಾರೆ. ಇನ್ನೂ ಎತ್ತಿನಹೊಳೆ ವಿಳಂಬ ಆಗುತ್ತದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡು ಜಿಲ್ಲೆಗೆ ಇತ್ತೀಚೆಗೆ ಅನುಷ್ಠಾನಗೊಳಿಸುತ್ತಿರುವ ಹೆಬ್ಟಾಳ-ನಾಗವಾರ ತ್ಯಾಜ್ಯ ಸಂಸ್ಕರಿತ ಯೋಜನೆಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 

ಅವೈಜ್ಞಾನಿಕ: ಬೆಂಗಳೂರಿನ ಜನ ಬಳಸಿ ಚರಂಡಿಗೆ ಬಿಟ್ಟಿರುವ ಕೊಳಚೆ ನೀರು ಜಿಲ್ಲೆಗೆ ಹರಿಸುವುದು ಅಪಾಯಕಾರಿ. ಯೋಜನೆ ಅವೈಜ್ಞಾನಿಕವಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಸ್ಥಳೀಯ ಪ್ರಗತಿಪರ ಪರಿಸರ ಚಿಂತಕರ ವೇದಿಕೆ ಹೋರಾಟಕ್ಕೆ ಇಳಿದಿವೆ. ಕಾಂಗ್ರೆಸ್‌ ಹೊರತು ಪಡಿಸಿ ಜೆಡಿಎಸ್‌, ಬಿಜೆಪಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

Advertisement

ನೀರಾವರಿ ಹೋರಾಟಕ್ಕೆ ಸಿಗದ ಸ್ಪಂದನೆ: ಇನ್ನೂ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳು ಜಾರಿಗೊಳ್ಳ ಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿ ದಶಕಗಳಿಂದಲೂ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಸರ್ಕಾರಗಳ ಸ್ಪಂದನೆ ಸಿಗದಿರುವುದು ಜಿಲ್ಲೆಯ ಜನತೆಯಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಶಾಶ್ವತ ನೀರಾವರಿಗಾಗಿ ಅನೇಕ ಬಾರಿ ಬಂದ್‌, ಧರಣಿ, ಪ್ರತಿಭಟನೆ, ರಸ್ತೆ ತಡೆಗಳು ನಡೆಸಿದರೂ ಸರ್ಕಾರಗಳು ಜಿಲ್ಲೆಯ ನೀರಿನ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಿರುವುದು ಎದ್ದು ಕಾಣುತ್ತಿದೆ. ಈ ಹಿಂದೆ ನೀರಾವರಿಗಾಗಿ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ, ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ, ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರೂ ಸರ್ಕಾರಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬ ಆಕ್ರೋಶ ಹೋರಾಟಗಾರರಲ್ಲಿ ಮಡುಗುಟ್ಟಿದೆ. ಇನ್ನೂ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ನೀರಾವರಿ ಯೋಜನೆಗಳು ಬರೀ ಚುನಾವಣಾ ಅಸ್ತ್ರಗಳಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತಿದ್ದು, ಸರ್ಕಾರ ಬದಲಾದಂತೆ ನೀರಾವರಿ ಯೋಜನೆಗಳು ಬದಲಾಗುತ್ತಿವೆಂಬ ಸಿಟ್ಟು ಜಿಲ್ಲೆಯ ಜನರಲ್ಲಿ ಬೇರೂರಿದೆ.

ಒಟ್ಟಾರೆ ಸದಾ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಗೆ ಈಗ ಶಾಶ್ವತ ನೀರಾವರಿ ಯೋಜನೆಗಳು ತೀರಾ ಅವಶ್ಯಕವಾಗಿದ್ದು, ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ನೀರಿನ ಬವಣೆಗೆ ಶಾಶ್ವತ ಪರಿಹಾರ ಒದಗಿಸುವಂತ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಬೇಕಿದ್ದು, ಈ ಬಾರಿಯ ಬಜೆಟ್‌ನಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸುವುದೇ ಎಂಬುದನ್ನು ಕಾದು
ನೋಡಬೇಕಿದೆ ಆತಂಕ ತಂದ ಫ್ಲೋರೈಡ್‌ ಕಾಯಿಲೆ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳನ್ನು ಮೀತಿ ಮೀರಿ ಎಂದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ. 

ಅಶ್ರಯಿಸುತ್ತಿರುವುದರಿಂದ ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯ ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿದು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರ ಪರಿಣಾಮ ಜಿಲ್ಲಾದ್ಯಂತ ಫ್ಲೋರೈಡ್‌ ನೀರಿನ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು ಇದರಿಂದ ಫ್ಲೋರೈಡ್‌ ಕಾಯಿಲೆ ಕಾಣಿಸಿಕೊಳ್ಳುವ ಮೂಲಕ ಮಕ್ಕಳ, ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾಯಿಲೆಯಿಂದ ಚಿಕ್ಕ ವಯಸ್ಸಿನ ಮಕ್ಕಳು ಸಹ ಮದುಕರಂತೆ ಕಾಣುತ್ತಿದ್ದು, ವಿಶೇಷವಾಗಿ ಹಲ್ಲು ಹಾಗೂ ಮೂಳೆ ಕ್ಯಾನ್ಸರ್‌ ಕಾಣಿಸಿ ಕೊಂಡು ಆತಂಕ ಮೂಡಿಸಿದೆ. ಜೊತೆಗೆ ಶಾಶ್ವತ ನೀರಾವರಿ ಮರೀಚಿಕೆಯಿಂದ ಕೃಷಿ ಚುಟುವಟಿಕೆ ಸ್ತಬ್ಧಗೊಂಡು ಜನರ ಆರ್ಥಿಕ, ಸಾಮಾಜಿಕ,
ಶೈಕ್ಷಣಿಕ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ.

ಕೆರೆಗಳ ಪುನಶ್ಚೇತನಕ್ಕೆ ಪ್ಯಾಕೇಜ್‌ ಘೋಷಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನ ಜೀವನಕ್ಕೆ ಜೀವಾಳವಾಗಿರುವ ಕೆರೆ, ಕುಂಟೆಗಳ ಪುನಶ್ಚೇತನಕ್ಕೆ ಸರ್ಕಾರ ಈ ಬಾರಿಯ ಬಜೆಟ್‌ ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕಿದೆ.

ಜಿಲ್ಲಾದ್ಯಂತ 4 ಸಾವಿರಕ್ಕೂ ಅಧಿಕ ಕೆರೆಗಳಿದ್ದರೂ ಒತ್ತುವರಿದಾರರ ಹೊಟ್ಟೆ ಸೇರಿವೆ. ಇನ್ನೂ ಕೆರೆಗಳಲ್ಲಿ ಹೂಳು ತೆಗೆಯುವುದನ್ನು ಮರೆತಿರುವುದರಿಂದ ಹಲವಾರು ಕೆರೆಗಳು ಕಣ್ಣಿಗೆ ಕಾಣ ದಂತೆ ಕಣ್ಮರೆಯಾಗಿವೆ. ಹೀಗಾಗಿ ಪ್ರತಿ ವರ್ಷ·ಮಳೆ ನೀರು ಕೆರೆ, ಕುಂಟೆಗಳಲ್ಲಿ ಸಂಗ್ರಹ ವಾಗದೇ ವ್ಯರ್ಥವಾಗಿ ಆಂಧ್ರ ಪಾಲಾಗುತ್ತಿವೆ. ಆದ್ದರಿಂದ ಸರ್ಕಾರ ಜಿಲ್ಲೆಯ ಜಲಮೂಲಗಳಾದ ಕೆರೆ, ಕುಂಟೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next