Advertisement

 ಜಿಲ್ಲಾ ಮಟ್ಟದ ಎಸ್ಸಿಎಸ್ಟಿ ಘಟಕದ ಮಹಾಸಭೆ

04:51 PM Dec 27, 2017 | Team Udayavani |

ಸುಳ್ಯ : ದ.ಕ. ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಿಲ್ಲಾ ಮಟ್ಟದ ಮಹಾಸಭೆ ಮಂಗಳವಾರ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಜರಗಿತು. 

Advertisement

ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ, ಅಹವಾಲುಗಳನ್ನು ಆಲಿಸಿ, ನಿರ್ದಿಷ್ಟ ಪ್ರಕರಣಗಳ ಬಗ್ಗೆ ದೂರು ನೀಡಿದರೆ ಪರಿಹರಿಸಲು ಬದ್ಧತೆಯಿಂದ ಪ್ರಯತ್ನಿಸುವುದಾಗಿ ತಿಳಿಸಿದರು. ಬಂಟ್ವಾಳ ವಿಭಾಗದ ಡಿವೈಎಸ್‌ಪಿ ಡಾ| ಅರುಣ್‌ ಕೆ., ಸುಳ್ಯ ವೃತ್ತನಿರೀಕ್ಷಕ ಸತೀಶ್‌ ಕುಮಾರ್‌, ಸುಳ್ಯ ಠಾಣೆ ಎಸ್‌.ಐ. ಮಂಜುನಾಥ್‌ ಉಪಸ್ಥಿತರಿದ್ದರು.

ಅರಣ್ಯಇಲಾಖೆ ವಿರುದ್ಧ ದೂರು
ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ 94 ಸಿ ಹಕ್ಕುಪತ್ರ ದೊರೆತ ಬಳಿಕ ಪಂಚಾಯತ್‌ ನಿರ್ದೇಶನದಂತೆ ಮನೆ ನಿರ್ಮಾಣಕ್ಕೆ ನಿರ್ಮಿಸಿರುವ ಪಂಚಾಂಗವನ್ನು ಅರಣ್ಯ ಇಲಾಖೆ ಪೂರ್ತಿ ಕೆಡವಿರುವ ಬಗ್ಗೆ ಸುಕುಮಾರ ಮತ್ತು ಲಲಿತಾ ದಂಪತಿ ದಾಖಲೆ ಸಮೇತ ವಿವರಿಸಿ, ಅಳಲು ತೋಡಿಕೊಂಡರು. ಹಕ್ಕುಪತ್ರ ಮತ್ತು ಜಿಪಿಎಸ್‌ ಸರ್ವೆ ಆದ ಬಳಿಕವೂ ಅರಣ್ಯ ಇಲಾಖೆ ಕ್ರಮ ಖಂಡನೀಯ.

ಇಲಾಖೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಇಲ್ಲವೇ ಕೆಡವಿದ್ದನ್ನು ಮತ್ತೆ ನಿರ್ಮಿಸಿಕೊಡುವಂತೆ ದಲಿತ ಮುಖಂಡರಾದ ನಂದರಾಜ್‌ ಸಂಕೇಶ, ಆನಂದ ಬೆಳ್ಳಾರೆ, ಅಚ್ಯುತ ಮಲ್ಕಜೆ, ಸರಸ್ವತಿ ಬೊಳಿಯಮಜಲು ಆಗ್ರಹಿಸಿದರು. ದಾಖಲೆ ಪರಿಶೀಲಿಸಿ, ಮಾಹಿತಿ ಪಡೆದ ಎಸ್ಪಿ, ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಗೆರಡು ಸಲಕರಣೆ
ಪಯಸ್ವಿನಿ ನದಿಯಲ್ಲಿ ದಲಿತ ಯುವಕ ಮುಳುಗಿದಾಗ ಬೋಟ್‌ ಹಾಗೂ ಮುಳುಗು ತಜ್ಞರಿಲ್ಲದೆ ಆತ ಮೃತಪಟ್ಟ ಬಗ್ಗೆ ದಾಸಪ್ಪ ಅಜ್ಜಾವರ ಮಾಹಿತಿ ನೀಡಿದರು. ಈ ಬಗ್ಗೆ ಸುಳ್ಯ ಎಸ್‌ಐ ಅವರೊಂದಿಗೆ ಮಾಹಿತಿ ಪಡೆದರು. ಬಳಿಕ ಪ್ರತಿಕ್ರಿಯಿಸಿದ ಎಸ್‌ಪಿ ರೆಡ್ಡಿ, ಪೊಲೀಸ್‌ ಮತ್ತು ಗೃಹರಕ್ಷಕ ತಂಡಗಳಿಗೆ, ಮೃತದೇಹ ಪತ್ತೆಹಚ್ಚುವ ಎರಡು ಸಾಧನ ಒದಗಿಸುವ ಟೆಂಡರ್‌ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ ಎಂದರು.

Advertisement

ಆಶ್ರಯ ಮನೆ ನಿರ್ಮಾಣ
ಸುಳ್ಯ ನ.ಪಂ.ನಲ್ಲಿ 3.30 ಲಕ್ಷ ರೂ. ವೆಚ್ಚದ ಆಶ್ರಯ ಮನೆ ಯೋಜನೆಯ 1 ಕಂತು ಮಾತ್ರ ಪಾವತಿಯಾಗಿದೆ. ಇದರಿಂದ ಬಡ ದಲಿತ ಕುಟುಂಬಗಳಿಗೆ ಕಷ್ಟವಾಗಿದೆ ಎಂದು ಆನಂದ ಬೆಳ್ಳಾರೆ ದೂರಿದರು. ಸುಬ್ರಹ್ಮಣ್ಯದಲ್ಲಿ ಗೃಹರಕ್ಷಕರು ಹೆಚ್ಚಾಗಿ ದಲಿತ ಸಮುದಾಯವರೇ ಇದ್ದು, ಅವರನ್ನು ತೆಗೆದುಹಾಕಲಾಗಿದೆ. ಪುನರ್‌ ನೇಮಕವಾಗಬೇಕು ಎಂದು ಅಚ್ಯುತ ಮಲ್ಕಜೆ ಹೇಳಿದಾಗ, ಸರಕಾರಿ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಮತ್ತೂಮ್ಮೆ ಪರಿಶೀಲಿಸುವುದಾಗಿ ತಿಳಿಸಿದರು. 

ಜನಸ್ನೇಹಿಯಾಗಲಿ
ಪೊಲೀಸ್‌ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಬೀಟ್‌ ವ್ಯವಸ್ಥೆ ಪುನಾರರಂಭಿಸಬೇಕು. ದಲಿತ ದೌರ್ಜನ್ಯ ಕಾಯಿದೆ ದುರ್ಬಳಕೆ ತಡೆಯಬೇಕು ಎಂದು ಮುಖಂಡ ನಂದರಾಜ ಸಂಕೇಶ ಒತ್ತಾಯಿಸಿದರು. ಬಂಟ್ವಾಳ ಕಡೇಶ್ವಾಲ್ಯದಲ್ಲಿ ತನಿಯ ಎಂಬವರ 90 ಸೆಂಟ್ಸ್‌ ಜಾಗದಲ್ಲಿ ಕೆಪಿಟಿಸಿಎಲ್‌ ವಿದ್ಯುತ್‌ ಮಾರ್ಗ ಅಳವಡಿಸಿದ್ದರೂ
ಪರಿಹಾರ ನೀಡಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಸುಳ್ಯದಲ್ಲಿ ಖಾಸಗಿ ಬಸ್‌ ಗಳು ಪರವಾನಿಗೆಯಿಲ್ಲದೆ ಓಡಾಟ ನಡೆಸಿವೆ ಎಂದು ದಾಸಪ್ಪ ಹೇಳಿದರು. ಪಡಿತರ ಕೂಪನ್‌ 6 ತಿಂಗಳಿಗೊಮ್ಮೆ ನೀಡುವಂತೆ ಸಂಜಯಕುಮಾರ್‌ ಒತ್ತಾಯಿಸಿದರು. ಮುರುಳ್ಯ ಕಾಪುತಡ್ಕ ನಿವಾಸಿಗಳು ದಾರಿ ತಕರಾರು ಬಗ್ಗೆ ದೂರಿದರು.

ಮರ್ಕಂಜ ಗ್ರಾಮದಲ್ಲಿ ಸಿಸಿಟಿವಿ ಇದೆ, ಬೆಳಕಿನ ವ್ಯವಸ್ಥೆಯಿಲ್ಲ. ಕಳ್ಳತನ ತಪ್ಪಿಸಲು ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದಾಗ ಸ್ಥಳೀಯ ಪಂಚಾಯತ್‌ಗೆ ಮನವಿ ಮಾಡುವಂತೆ ಎಸ್‌ಪಿ ತಿಳಿಸಿದರು. ಸುಳ್ಯ ವಿಧಾನಸಭಾ ಮೀಸಲಾತಿ ವಿರುದ್ಧ ಆಂದೋಲನಕ್ಕೆ ಮುಂದಾಗಿರುವ ಬಗ್ಗೆ ಸಭೆಯಲ್ಲಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಬಂಟ್ವಾಳ ಎಸ್‌ಐ ಪರ- ವಿರೋಧ ಚರ್ಚೆ
ಬಂಟ್ವಾಳ ದೇವಸ್ಥಾನವೊಂದರಲ್ಲಿ ಕಾಣಿಕೆ ಹುಂಡಿ ಕದ್ದ ಮೂಕ ವ್ಯಕ್ತಿಯನ್ನು ಸ್ಥಳೀಯರು ಹಿಡಿದಿದ್ದರೂ ಪಿಎಸ್‌ಐ ಚಂದ್ರಶೇಖರ್‌, ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ. ಆ ಬಳಿಕ ಆತ ಸೈಕಲ್‌ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಬಂಟ್ವಾಳದ ದಲಿತ ಮುಖಂಡ ವಿಶ್ವನಾಥ ದೂರಿದರು. ಆದರೆ, ಘಟನೆ ವೇಳೆ ಅಲ್ಲಿನ ಎಸ್‌ಐ ಸುಳ್ಯದಲ್ಲಿ ಕಾರ್ಯ ನಿರ್ವಹಿಸಲು ತೆರಳಿದ್ದರು. ಅವರ ಬಗ್ಗೆ ಅಪಪ್ರಚಾರ ಬೇಡ. ಅವರನ್ನು ಸುಳ್ಯಕ್ಕೆ ನೇಮಿಸಿ ಎಂದು ಮನವಿ ಮಾಡುತ್ತೇವೆ ಎಂದರು. ಮಾತಿನ ಚಕಮಕಿ ನಡೆದಾಗ ಮಧ್ಯ ಪ್ರವೇಶಿಸಿದ ಎಸ್ಪಿ, ಆರೋಪಿ ವಿರುದ್ಧ ಕೇಸು ದಾಖಲಿಸಲು ಕಾನೂನಿನ ಇತಿಮಿತಿಗಳಿವೆ ಎಂದು ತಿಳಿಸಿ, ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next