ರಾಯಚೂರು: ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಏ.4, 5ರಂದು ಕೃಷಿ ವಿವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಪಂ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ಕಳೆದ ವರ್ಷ ಕೂಡ ಜಿಲ್ಲೆಯಲ್ಲಿ ಮೇಳ ಹಮ್ಮಿಕೊಳ್ಳಲಾಗಿತ್ತು. 900ಕ್ಕೂ ಅಧಿಕ ಯುವಕರಿಗೆ ಉದ್ಯೋಗಾವಾಕಾಶ ಸಿಕ್ಕಿತ್ತು. ಈ ಬಾರಿಯೂ 150ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಸುಮಾರು 6ರಿಂದ 8ಸಾವಿರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ, ಎಷ್ಟು ಹುದ್ದೆಗಳಿವೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ನೋಂದಣಿ ಪ್ರಕ್ರಿಯೆ ಮುಗಿದಾಗ ನಿಖರ ಮಾಹಿತಿ ತಿಳಿಯಲಿದೆ. ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ಆಕಾಂಕ್ಷಿಗಳು ಶೀಘ್ರದಲ್ಲೇ ನೋಂದಣಿ ಮಾಡಬೇಕು ಎಂದರು.
ಇದಕ್ಕಾಗಿ ವಿಶೇಷ ಅಪ್ಲಿಕೇಶನ್ ಹಾಗೂ ವೆಬ್ ಸೈಟ್ ಆರಂಭಿಸಲಾಗಿದೆ. ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಐಟಿ, ಬಿಟಿ, ಅಟೋಮೊಬೈಲ್ಸ್, ಮೆಕ್ಯಾನಿಕಲ್, ಕನ್‌ಸ್ಟ್ರಕ್ಷನ್,ಮಾರ್ಕೆಟಿಂಗ್, ಸೇಲ್ಸ್, ರಿಟೇಲ್, ಟೆಲಿಕಾಂ ಬಿಪಿಒ, ಟೆಕ್ಸ್‌ಟೈಲ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹೆಲ್ತ್‌ಕೇರ್, ಹೋಟೆಲ್ ನಿರ್ವಹಣೆ, ಮಾನುಫ್ಯಾಕ್ಚರಿಂಗ್, ಟ್ರಾನ್ಸ್‌ಪೊàರ್ಟ್ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.
18ರಿಂದ 35 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ ಹಾಗೂ ಅಪ್ರಂಟಿಸ್ ತರಬೇತಿ, ಬಿಇ, ಡಿಪ್ಲೋಮಾದ ಎಲ್ಲ ಟ್ರೇಡ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಇನ್ನಿತರ ಕೋರ್ಸ್‌ಗಳಲ್ಲಿ ಪಾಸ್ ಆದ ಅಭ್ಯರ್ಥಿಗಳು ಭಾಗವಹಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ: 08532-240182 ಮೊಬೈಲ್: 91132 96691 ಅಥವಾ 80950 50436 ಮೂಲಕ ಸಂಪರ್ಕಿಸಬಹುದು ಎಂದು ಹೇಳಿದರು..
ಇದೇ ವೇಳೆ ಉದ್ಯೋಗ ಮೇಳದ ಕರಪತ್ರ ಬಿಡುಗಡೆ ಮಾಡಿ, ಮೇಳಕ್ಕೆ ಸಂಬಂ ಧಿಸಿದ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ದುರುಗೇಶ, ಪ್ರೊಬೇಷನರಿ ಐಎಎಸ್ ಅಧಿ ಕಾರಿ ಯುಕೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಸೇರಿ ಇತರರಿದ್ದರು.