Advertisement

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ 

12:32 PM Nov 17, 2018 | |

ಮಡಿಕೇರಿ: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಅವರು ತಿಳಿಸಿದರು.

ವಕೀಲರಾದ ಮೀನಾ ಕುಮಾರಿ ಅವರು ಮಾತನಾಡಿ ಕೌಟುಂಬಿಕ ಹಿಂಸೆ ಅಥವಾ ಕಚೇರಿಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ 3 ತಿಂಗಳೊಳಗೆ ದೂರು ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಅವರು ಸಲಹೆ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌ ಅವರು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಬೇಕು ಎಂದು ತಿಳಿಸಿದರು.

ಮಹಿಳಾ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ 15 ದಿನಗಳೊಳಗೆ ಸಮಿತಿ ರಚನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಮಹಿಳಾ ಗ್ರಾಮ ಸಭೆಗಳಲ್ಲಿ ಸಮಸ್ಯೆಗಳು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇ ಸ್ವಾಮಿ ಇದುವರೆಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ 936 ಪ್ರಕರಣಗಳು ದಾಖಲಾಗಿದ್ದು 743 ಪ್ರಕರಣಗಳು ಇತ್ಯರ್ಥವಾಗಿದೆ. 83 ಪ್ರಕರಣಗಳು ಸಂರಕ್ಷಣಾಧಿಕಾರಿ ಹಂತದಲ್ಲಿವೆ. ಹಾಗೆಯೇ 24 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದೆ. 34 ಪ್ರಕರಣಗಳು ನ್ಯಾಯಾಧೀಶರಿಂದ ಇತ್ಯರ್ಥವಾಗಿವೆ. 6 ಪ್ರಕರಣಗಳು ವಜಾಗೊಂಡಿದ್ದು 46 ಪ್ರಕರಣಗಳು ಕಾನೂನು ಸಲಹೆಯಿಂದ ಇತ್ಯರ್ಥ ಗೊಂಡಿದ್ದು, 107 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.

Advertisement

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ ಪ್ರಸಕ್ತ ವರ್ಷದಲ್ಲಿ ಅಂದರೆ ಏಪ್ರಿಲ್‌ ನಿಂದ ಇಲ್ಲಿಯವರೆಗೆ 102 ಪ್ರಕರಣಗಳು ದಾಖಲಾಗಿದ್ದು, 52 ಪ್ರಕರಣಗಳು ಇತ್ಯರ್ಥಗೊಂಡಿದ್ದು, 50 ಪ್ರಕರಣಗಳು ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್‌ ಸಿಇಒ ಲಕ್ಷ್ಮೀಪ್ರಿಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೊ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಯಾದೇವಿ ಗಲಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ| ಶಿವಕುಮಾರ್‌, ಕಾರ್ಮಿಕ ಅಧಿಕಾರಿ ಯತ್ನಟಿ, ಸಿಡಿಪಿಒ ಗಳಾದ ಸವಿತಾ, ಶೀಲಾ, ಸೀತಾಲಕ್ಷ್ಮೀ ಒಡಿಪಿ ಸಂಸ್ಥೆಯ ಜಾಯ್ಸ ಮೆನೆಜಸ್‌, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಹಾಜರಿದ್ದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ ಗಳು 2006, ಈ ಕಾಯ್ದೆ ರಾಜ್ಯದಲ್ಲಿ 2007 ರಿಂದ ಜಾರಿಯಲ್ಲಿದ್ದು. ಈ ಯೋಜನೆಯ ಉದ್ದೇಶವು ಮಹಿಳೆಯರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು, ಕುಟುಂಬದೊಳಗೆ ನಡೆಯುವ ಯಾವುದೇ ದೌರ್ಜನ್ಯಗಳಿಂದ ರಕ್ಷಿಸಲು ಹಾಗೂ ದೈಹಿಕ, ಲೈಂಗಿಕ, ಮೌಖೀಕ, ಭಾವನಾತ್ಮಕ ಮತ್ತು ಆರ್ಥಿಕ ದೌರ್ಜನ್ಯಗಳಿಂದ ರಕ್ಷಿಸುವುದಾಗಿದೆ. ಈ ಯೋಜನೆಯನ್ನು ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಾಗ ನ್ಯಾಯಾಲಯದ ಮುಖಾಂತರ ಮಹಿಳೆಯರಿಗೆ ಆರ್ಥಿಕ ಪರಿಹಾರ, ರಕ್ಷಣಾ ಆದೇಶ, ವಾಸದ ಆದೇಶ, ಮಕ್ಕಳ ವಶ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ಹಾಗೂ ಕಾನೂನು ನೆರವನ್ನು ಒದಗಿಸಲು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಾಂತ್ವನ ಕೇಂದ್ರಗಳಲ್ಲಿ ನೊಂದ ಮಹಿಳೆಯರಿಗೆ ಉಚಿತ ಕಾನೂನು ಸೇವೆ, ಕೌಟುಂಬಿಕ ಸಲಹೆ, ಆಪ್ತ ಸಮಾಲೋಚನೆ ಹಾಗೂ ಅಲ್ಪಾವಧಿ ಪುನರ್ವಸತಿಯನ್ನು ನೀಡಲಾಗುತ್ತಿದೆ.
-ಮಮ್ತಾಜ್‌
ಮಕ್ಕಳ ರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next