ಧಾರವಾಡ: ಎಲ್ಲ ಬಂಡವಾಳಶಾಹಿ ರಾಜಕೀಯ ಪಕ್ಷಗಳು ಚುನಾವಣೆಗೆ ಹಾಗೂ ಅಧಿಕಾರಕ್ಕೆ ಸೀಮಿತವಾಗಿದ್ದು, ರೈತರ ಹೆಸರಿನಲ್ಲಿ ಸ್ವಾತಂತ್ರ್ಯ ನಂತರದಿಂದ ಮೋಸ ಮಾಡುತ್ತಲೇ ಬಂದಿವೆ ಎಂದು ಎಐಕೆಕೆಎಂಎಸ್ ರಾಜ್ಯ ಖಜಾಂಚಿ ವಿ. ನಾಗಮ್ಮಾಳ್ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ಜಿಲ್ಲಾ ರೈತ ಕೃಷಿ ಕಾರ್ಮಿಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಮತ್ತೂಂದು ಚುನಾವಣೆ, ಮತ್ತೂಂದು ಪಕ್ಷದ ಅಧಿಕಾರದಿಂದ ರೈತರ, ದುಡಿಯುವ ವರ್ಗದ ಬವಣೆ ತೀರುವುದಿಲ್ಲ. ಇದನ್ನು ಅರಿತುಕೊಂಡು ಹೋರಾಟ ಮುನ್ನಡೆಸಬೇಕು. ಆ ನಿಟ್ಟಿನಲ್ಲಿ ಧಾರವಾಡದಲ್ಲಿ ಏ.28 ಮತ್ತು 29ರಂದು ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಮ್ಮೇಳನವನ್ನು ಎಐಕೆಕೆಎಂಎಸ್ ನಿಂದ ಸಂಘಟಿಸಲಾಗುತ್ತದೆ ಎಂದರು.
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ನಡೆದ ಐತಿಹಾಸಿಕ ಹೋರಾಟದ ಗೆಲುವು ಎಲ್ಲ ದುಡಿಯುವ ವರ್ಗಕ್ಕೆ ಸ್ಪೂರ್ತಿ ತುಂಬಿದೆ. ರೈತರ ಜ್ವಲಂತ ಸಮಸ್ಯೆಗಳ ವಿರುದ್ಧ ಬಲಿಷ್ಠ ಆಂದೋಲನ ಕಟ್ಟಬೇಕಿದೆ. ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಜಾರಿಗಾಗಿ ಹೋರಾಟ ಮುನ್ನಡೆಸಬೇಕಾಗಿದೆ ಎಂದು ಹೇಳಿದರು.
ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಇದ್ದರು. ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ದೀಪಾ ಧಾರವಾಡ, ಉಪಾಧ್ಯಕ್ಷರಾಗಿ ಹನುಮೇಶ ಹುಡೇದ, ಕಾರ್ಯದರ್ಶಿಯಾಗಿ ಶರಣು ಗೋನವಾರ, ಜಂಟಿ ಕಾರ್ಯದರ್ಶಿಗಳಾಗಿ ಉಳವಪ್ಪ ಅಂಗಡಿ, ಮಾರುತಿ ಪೂಜಾರ, ರಾಜು ನವಲೂರ, ಜಗದೀಶ ಪೂಜಾರ, ಕಚೇರಿ ಕಾರ್ಯದರ್ಶಿಯಾಗಿ ಗೋವಿಂದ ಕೃಷ್ಣಪ್ಪನವರ ಒಳಗೊಂಡ 60 ಜನರನ್ನು ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.