ಧಾರವಾಡ: ಉದ್ಯಮದಲ್ಲಿ ಇಂದಿನ ಅಗತ್ಯತೆ ಆಧಾರವಾಗಿ ಕವಿವಿ ಎಲ್ಲ ವಿಭಾಗಗಳಲ್ಲಿ ಪಠ್ಯ ವಿಷಯ ಪರಿಷ್ಕರಣೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ಕುಲಪತಿ ಪ್ರೊ| ಪ್ರಮೋದ ಗಾಯಿ ಹೇಳಿದರು.
ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳವಾರ ನಡೆದ ಸ್ನಾತಕೋತ್ತರ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದೊಳಗೆ ಬಹುತೇಕ ಎಲ್ಲ ಸ್ನಾತಕೋತ್ತರ ವಿಭಾಗಗಳ ಪಠ್ಯ ವಿಷಯ ನವೀಕರಣ ಆಗಲಿದೆ ಎಂದರು.
ಕಳೆದ ಎರಡು ದಶಕಗಳಲ್ಲಿ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದ್ದು, ಸಮಸ್ಯೆಗಳನ್ನು ತಿಳಿಸುವುದರ ಜೊತೆಗೆ ಅವುಗಳ ಪರಿಹಾರ ಅಥವಾ ಪರ್ಯಾಯ ಮಾರ್ಗ ಸೂಚಿಸುವ ಕಾರ್ಯವನ್ನು ಕೂಡ ಮಾಧ್ಯಮಗಳು ಈಗ ಮಾಡಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ| ವಿಜಯಲಕ್ಷ್ಮಿ ಅಮ್ಮಿನಭಾವಿ ಮಾತನಾಡಿ, ಸಾಮಾಜಿಕ ಬದಲಾವಣೆಗೆ ಪತ್ರಕರ್ತರ ಪಾತ್ರ ಬಹಳ ದೊಡ್ಡದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ ಸುಣಗಾರ ಅವರನ್ನು ಸನ್ಮಾನಿಸಲಾಯಿತು.
ಪ್ರಸಾದ, ಮೇಘಾ ಎಸ್, ಸಂಧ್ಯಾರಾಣಿ, ಅಕ್ಷಯ ಉರಮುಂದಿನ, ಸಂತೋಷ ಬಂಡಿ ಅನಿಸಿಕೆ ವ್ಯಕ್ತಪಡಿಸಿದರು. ಭೀಮಪ್ಪ ಅಬ್ಬಿಗೇರಿ, ಕೃಷ್ಣ ಈರಗಾರ ಪ್ರಾರ್ಥನಾ ಗೀತೆ ಹಾಡಿದರು. ಡಾ| ಜೆ.ಎಂ. ಚಂದುನವರ ಸ್ವಾಗತಿಸಿದರು. ಅಕ್ಷಯ ಜೋಶಿ ನಿರೂಪಿಸಿದರು. ಡಾ| ಸಂಜಯ ಮಾಲಗತ್ತಿ ವಂದಿಸಿದರು.