Advertisement

ಜಿಲ್ಲಾಸ್ಪತ್ರೆ ಅಭಿವೃದ್ಧಿ ಕಾಮಗಾರಿ 3 ತಿಂಗಳಲ್ಲಿ ಮುಕ್ತಾಯ

11:55 AM Sep 08, 2017 | |

ಧಾರವಾಡ: ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಕಟ್ಟಡ ಕಾಮಗಾರಿ ಮೂರು ತಿಂಗಳಲ್ಲಿ ಮುಕ್ತಾಯ ಆಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಆಸ್ಪತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆರಿಗೆಗೆ ಬಂದವರಿಗೆ ಕೊಂಚ ತೊಂದರೆ ಆಗುತ್ತಿದೆ. ಮೂರು ತಿಂಗಳ ನಂತರ ಕಾಮಗಾರಿ ಮುಗಿದ ಮೇಲೆ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ನಮ್ಮ ಪಕ್ಷದ ಕಾರ್ಯಕರ್ತರಿಂದ ಮತ್ತು ಜನರಿಂದ ಹಲವಾರು ಬಾರಿ ಆಸ್ಪತ್ರೆ ಸ್ವತ್ಛತೆ ಕೊರತೆ ಹಾಗೂ ಸಿಬ್ಬಂದಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ಆಗಮಿಸಿದ್ದೇನೆ. ಸದ್ಯ ಈಗ ಆಸ್ಪತ್ರೆಯಲ್ಲಿ ನೀಡುವ ಊಟ ಮತ್ತು ಚಿಕಿತ್ಸೆ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು. ನೌಕರರು ರೋಗಿಗಳ ಬಳಿ ಹಣ ಕೇಳುವುದು ತಪ್ಪು. ಕೂಡಲೇ ಇದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಹೆರಿಗೆ ಕಿಟ್‌ ಕಳೆದ ಮೂರು ತಿಂಗಳಿಂದ ನೀಡುವುದನ್ನು ಬಂದ್‌ ಮಾಡಿದ್ದಾರೆ. 

ಆದ್ದರಿಂದ ಜಿಲ್ಲೆಯ ಮಂತ್ರಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡುತ್ತೇನೆ. ಸರ್ಕಾರ ಈ ಯೋಜನೆಯನ್ನು ನಿಲ್ಲಿಸಬಾರದು. ಕಿಟ್‌ನ್ನು ಆಸ್ಪತ್ರೆಯಲ್ಲಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು. ವೈದ್ಯಾಧಿಕಾರಿಗಳು ಹೇಳಿದಂತೆ ಆಸ್ಪತ್ರೆಯಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದ ಹೆರಿಗೆ ಆದವರಿಗೆ ಬಿಸಿ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಶಾಸಕರೆದುರು ದೂರು: ಈ ಸಂದರ್ಭದಲ್ಲಿ ತಾಲೂಕಿನ ಅಮ್ಮಿನಬಾವಿಯ ಮರೆವ್ವಾ ಹೊಸಮನಿ ಎಂಬುವರು ಜಿಲ್ಲಾಸ್ಪತ್ರೆಯಲ್ಲಿ ಆಗುತ್ತಿರುವ ಅವಾಂತರಗಳ ಬಗ್ಗೆ ಶಾಸಕರ ಗಮನ ಸೆಳೆದರು. ಕಳೆದ ಎರಡು ದಿನಗಳ ಹಿಂದೆ ಹೆರಿಗೆಗೆ ಆಗಮಿಸಿದ್ದ ಜ್ಯೋತಿ ಮದಗುಣಕಿ ಎಂಬ ಮಹಿಳೆಗೆ ಹಾಸಿಗೆ ನೀಡದೆ ಮತ್ತು ಸರಿಯಾದ ಚಿಕಿತ್ಸೆ ನೀಡದ್ದರಿಂದ ಹೊಟ್ಟೆಯಲ್ಲಿ ಮಗು ಮೃತಪಟ್ಟಿದೆ ಎಂಬುದಾಗಿ ವೈದ್ಯರು ಹೇಳುತ್ತಿದ್ದಾರೆ.

Advertisement

ಆಸ್ಪತ್ರೆಗೆ ಹೆರಿಗೆಗೆಂದು ಬಂದ ಮಹಿಳೆಯರಿಗೆ ಚಿಕಿತ್ಸೆ ನೀಡದೆ ಓಡಾಡಿಸುತ್ತಾರೆ ಎಂದು ದೂರಿದರು. ಅಲ್ಲದೇ, ಅಳ್ನಾವರದ ಮಹ್ಮದ ಅಜರೊದ್ದಿನ ಕಳ್ಳಿಮನಿ ಎಂಬುವರು ಮಾತನಾಡಿ, ಪತ್ನಿಗೆ ಹೆರಿಗೆಯಾಗಿದೆ, ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಬಿಸಿ ನೀರು ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು. 

ದೂರು ಆಲಿಸಿದ ಶಾಸಕರು ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾ ಸರ್ಜನ್‌ ಡಾ| ಗಿರಿಧರ ಕುಕನೂರು ಅವರಿಗೆ ಸೂಚಿಸಿದರು. ಮುಖಂಡರಾದ ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ರಾಕೇಶ ನಾಝರೇ, ಬಸವರಾಜ ಹೊಸಳ್ಳಿ, ರಾಜು ಕೋಟೆಣ್ಣನವರ, ತುಳಸಾ ವಡ್ಡರ ಸೇರಿದಂತೆ ಹಲವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next