Advertisement

ಜಿಲ್ಲಾ ಕೋವಿಡ್‌ ಆಸ್ಪತ್ರೆ ಭರ್ತಿ

03:41 PM Jun 29, 2020 | Suhan S |

ಗದಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಶರವೇಗದಲ್ಲಿ ಹೆಚ್ಚುತ್ತಿದೆ. ರವಿವಾರ 30 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಪರಿಣಾಮ ಜಿಮ್ಸ್ ನ ನಿಗದಿತ ಕೋವಿಡ್‌-19 ಆಸ್ಪತ್ರೆಯ 117 ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ.

Advertisement

ಇನ್ನುಳಿದ ರೋಗಿಗಳಿಗೆ ಪಕ್ಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಲ್ಲಾಡಳಿತಕ್ಕೆ ಹತ್ತು ಹಲವು ಸವಾಲುಗಳನ್ನು ತಂದೊಡ್ಡಿದೆ. ಕಳೆದ 10 ದಿನಗಳಿಂದೀಚೆಗೆ ಸೋಂಕು ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಜೂ. 18ರಂದು 15 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಸೋಮವಾರದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿ ಏ. 7ರಂದು ರಂಗನವಾಡಿಯ 82 ವರ್ಷದ ವೃದ್ಧೆ(ಪಿ.166) ಗೆ ಸೋಂಕು ಕಂಡು ಬಂದಿತ್ತು. ಆ ನಂತರವೂ ಸುಮಾರು ಎರಡು ತಿಂಗಳವರೆಗೆ ಸೋಂಕಿತರ ಸಂಖ್ಯೆ ಎರಡು ಅಂಕಿ ದಾಟಿರಲಿಲ್ಲ. ಆದರೆ ಲಾಕ್‌ ಡೌನ್‌ ಸಡಿಲಿಕೆಯ ಭಾಗವಾಗಿ ಬಸ್‌ ಸಂಚಾರ ಹಾಗೂ ಮುಂಬೈ-ಗದಗ ರೈಲು ಆರಂಭದ ಬಳಿಕ ಕೋವಿಡ್ ಪ್ರಕರಣಗಳು ಹೆಚ್ಚಿವೆ.

ಆಸ್ಪತ್ರೆಯಲ್ಲಿ ಜಾಗವೇ ಇಲ್ಲ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಇಲ್ಲಿನ ಆಯುಷ್‌ ಇಲಾಖೆಯ ನೂತನ ಕಟ್ಟಡವನ್ನು ನಿಗದಿಪಡಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ 117 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ಆದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಶನಿವಾರ ರಾತ್ರಿ ವೇಳೆಗೆ ಆಸ್ಪತ್ರೆ ಭರ್ತಿಯಾಗಿದೆ. ತಕ್ಷಣಕ್ಕೆ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಂಕಿತರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ವಸತಿ ಶಾಲೆಯಲ್ಲಿ ವೈದ್ಯಕೀಯ ಸೌಕರ್ಯಗಳಿಲ್ಲದೇ ರೋಗಿಗಳು ಪರದಾಡು ವಂತಾಗಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಪಾಳೆಯಂತೆ ನಿರ್ವಹಿಸಲು ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆಯೂ ಕಂಡುಬರುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿಯಾಗಿದ್ದರಿಂದ ಲಭ್ಯವಿರುವ ಸಿಬ್ಬಂದಿಯನ್ನೇ ಸೇವೆಗೆ ಬಳಸಿಕೊಳ್ಳಲಾಗುತ್ತಿದ್ದು, ವೈದ್ಯರು ಮತ್ತು ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಎಚ್ಚೆತ್ತುಕೊಳ್ಳದ ಜನ: ವಲಸಿಗರಲ್ಲದೇ ಜಿಲ್ಲೆಯ ಹಳ್ಳಿಹಳ್ಳಿಗೂ ಕೋವಿಡ್‌ ವ್ಯಾಪಿಸುತ್ತಿದ್ದರೂ ಜಿಲ್ಲೆಯ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಮಾರುಕಟ್ಟೆ ಸೇರಿದಂತೆ ಜನನಿಬೀಡ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಓಡಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅಪಾಯವನ್ನು ಆಹ್ವಾನಿಸುತ್ತಿರುವುದು ವಿಪರ್ಯಾಸ.

Advertisement

ಪಿ. 9407 ಸೂಪರ್‌ ಸ್ಪ್ರೆಡರ್‌! : ಜೂ. 23ರಂದು ಇಟಗಿ ಗ್ರಾಮದ 38 ವರ್ಷದ ವ್ಯಕ್ತಿ(ಪಿ-9407) ಅಂತರ್‌ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಿಂದ ಸುಮಾರು 40ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಜೂ. 23ರಂದೇ ಆತನ ಸಂಪರ್ಕದಿಂದ ಅದೇ ಗ್ರಾಮದ 28 ವರ್ಷದ ವ್ಯಕ್ತಿ(ಪಿ-9409) ಹಾಗೂ 32 ವರ್ಷದ ಮಹಿಳೆ(ಪಿ-9408)ಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಪಿ-9407 ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಾಗಿ ಜೂ. 25ರಂದು ರೋಣ, ಗದಗ ಮತ್ತು ಮುಂಡರಗಿ ತಾಲೂಕಿನ 8 ಜನರಿಗೆ, ಜೂ. 26ರಂದು ರೋಣ ತಾಲೂಕಿನ ಮುಂಡರಗಿ ಹಾಗೂ ಗದಗಿನ ನಾಲ್ವರಿಗೆ ಸೋಂಕು ತಗುಲಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಲಭ್ಯವಿರುವ 117 ಹಾಸಿಗೆಗಳು ಭರ್ತಿಯಾಗಿದೆ. ಸದ್ಯ 170ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಇರುವುದರಿಂದ ಹೆಚ್ಚುವರಿ ರೋಗಿಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಕೆಸಿ ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ. -ಡಾ| ಪಿ.ಎಸ್‌. ಭೂಸರೆಡ್ಡಿ, ಜಿಮ್ಸ್‌ ನಿರ್ದೇಶಕ

ಜಿಲ್ಲೆಯಲ್ಲಿ ಕೋವಿಡ್‌-19 ಸಮುದಾಯಿಕವಾಗಿ ಹರಡಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವುದು, ಜಿಲ್ಲೆಯು ಗಂಭೀರ ಪರಿಸ್ಥಿತಿಗೆ ಸಿಲುಕುತ್ತಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಕೋವಿಡ್‌ ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸ್ಥಳೀಯ ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚೆ ನಡೆಸಿ, ಅವುಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ. -ಎಚ್‌.ಕೆ. ಪಾಟೀಲ, ಶಾಸಕ

 

-ವೀರೇಂದ್ರ ನಾಗಲದಿನ್ನಿ

 

Advertisement

Udayavani is now on Telegram. Click here to join our channel and stay updated with the latest news.

Next