ಕೊಪ್ಪಳ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಮತ ಎಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ. ಕಾಲೇಜಿನ ನೆಲ ಮಹಡಿಯಲ್ಲಿ ಸಿಂಧನೂರು, ಮಸ್ಕಿ, ಕನಕಗಿರಿ, ಸಿರಗುಪ್ಪ ಹಾಗೂ ಮೊದಲ ಮಹಡಿಯಲ್ಲಿ ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಚುನಾವಣಾಧಿಕಾರಿಗಳ ಕೊಠಡಿ 01, ಅಂಚೆ ಮತಪತ್ರ ಎಣಿಕಾ ಟೇಬಲ್ 04 (ಪ್ರತ ಟೇಬಲ್ಗೆ ಒಬ್ಬರಂತೆ) ವ್ಯವಸ್ಥೆ ಮಾಡಲಾಗಿದೆ.
ಏಜೆಂಟರ್ ನೇಮಕಾತಿ: ಪ್ರತಿ ಅಭ್ಯರ್ಥಿಗೆ ಮತ ಎಣಿಕಾ ಕೊಠಡಿಗೆ 14 ಜನ ಮತ ಎಣಿಕಾ ಏಜೆಂಟರ್‌ಗಳನ್ನು ನೇಮಕ ಮಾಡಲಾಗಿದೆ. ಗರಿಷ್ಠ ಏಜೆಂಟರ್ 117 ನೇಮಕ ಮಾಡಲಾಗುವುದು. ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟರ್‌ಗಳು ನಿಗದಿಪಡಿಸಿದ ನಮೂನೆ-18ರಲ್ಲೇ ಎಣಿಕಾ ಏಜೆಂಟರ್ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಮೇ 19ರೊಳಗಾಗಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಎಣಿಕಾ ಏಜೆಂಟರ್ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ಅಭ್ಯರ್ಥಿ ಹಾಗೂ ಏಜೆಂಟರು ಅಥವಾ ಯಾವುದೇ ವ್ಯಕ್ತಿಗಳಿಗೆ ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮತ ಎಣಿಕಾ ಕಾರ್ಯವು ಮೇ 23ರಂದು ಬೆಳಗ್ಗೆ 8ಕ್ಕೆ ಪ್ರಾರಂಭವಾಗಲಿದ್ದು, ಮತ ಎಣಿಕಾ ಏಜೆಂಟರು ನಿಗದಿತ ಸಮಯಕ್ಕೆ ಉಪಸ್ಥಿತರಿರಬೇಕು. ಎಣಿಕೆ ಏಜೆಂಟರು ನೇಮಿಸಿದ ಟೇಬಲ್ನಲ್ಲಿ ಮಾತ್ರ ಉಪಸ್ಥಿತರಿರುವುದು. ಬೇರೆ ಟೇಬಲ್ ಅಥವಾ ಕೊಠಡಿಗಳಲ್ಲಿ ಅವರಿಗೆ ಪ್ರವೇಶವಿರುವುದಿಲ್ಲ. ಮತ ಎಣಿಕಾ ಕಾರ್ಯವು ಮುಕ್ತಾಯವಾಗುವವರೆಗೆ ನಿಗದಿಪಡಿಸಿದ ಟೇಬಲ್ನಲ್ಲಿ ಮಾತ್ರ ಕೂರಬೇಕು ಎಂದರು.
ಇವಿಎಂಗಳ ಮತ ಎಣಿಕಾ ಕಾರ್ಯ ಮುಕ್ತಾಯವಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರಗಳ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ವಿವಿಪ್ಯಾಟ್‌ಗಳಲ್ಲಿನ ಸ್ಲಿಪ್‌ಗ್ಳ ಎಣಿಕೆ ಮಾಡಲಾಗುವುದು. ಈ ಅವಧಿಯಲ್ಲಿ ನಿಗದಿಪಡಿಸಿದ ವಿಸಿಬಿ (ವಿವಿ ಪ್ಯಾಟ್ ಕೌಂಟಿಂಗ್ ಬೂತ್)ಗಳಿಗೆ ಒಬ್ಬ ಏಜೆಂಟರ್ ಉಪಸ್ಥಿತರಿರುವಂತೆ ನೋಡಿಕೊಳ್ಳುವುದು. ಈ ಕುರಿತು ನೇಮಕಾತಿ ಏಜೆಂಟರ್‌ಗಳಿಗೆ ತಿಳಿಯಪಡಿಸಬೇಕು. ಮತ ಎಣಿಕಾ ಏಜೆಂಟರ್‌ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ. ಚಹಾ ಹಾಗೂ ಲಘು ಉಪಹಾರವನ್ನು ಮೊತ್ತ ಪಾವತಿ ಆಧಾರದ ಮೇಲೆ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಆವರಣದಲ್ಲಿನ ಕ್ಯಾಂಟೀನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
Advertisement
ಮತ ಎಣಿಕಾ ಸಿದ್ಧತೆಯ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
Related Articles
Advertisement
ಎಣಿಕಾ ಕಾರ್ಯ ಮುಕ್ತಾಯವಾಗಿ ಚುನಾವಣಾಧಿಕಾರಿಗಳಿಂದ ಅಧಿಕೃತ ಫಲಿತಾಂಶವನ್ನು ಘೋಷಿಸಿದ ನಂತರ ಎಲ್ಲಾ ವಿದ್ಯುನ್ಮಾನ ಮತಯಂತ್ರ ಹಾಗೂ ಚುನಾವಣಾ ಶಾಸನಬದ್ಧ, ಶಾಸನಬದ್ಧವಲ್ಲದ ದಾಖಲೆಗಳನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿನ ಇವಿಎಂ ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಿಡಲಾಗುವುದು. ಈ ಸ್ಟ್ರಾಂಗ್‌ರೂಮ್‌ಗೆ 24×7 ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮತ ಎಣಿಕಾ ಕಾರ್ಯವು ಮುಕ್ತ, ಶಾಂತ ರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಎಲ್ಲಾ ಅಭ್ಯರ್ಥಿಗಳು ಸಹಕರಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ರಾಜಕೀಯ ಪಕ್ಷದವರು ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಮತ ಎಣಿಕೆ ದಿನ ಜಿಲ್ಲಾದ್ಯಂತ ನಿಷೇಧಾಜ್ಞೆ:
ಲೋಕಸಭಾ ಚುನಾವಣೆ ಮತ ಎಣಿಕೆ ದಿನದಂದು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಆದೇಶ ಹೊರಡಿಸಿದ್ದಾರೆ. ಚುನಾವಣೆ ನಿಮಿತ್ತ ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಈ ಸಂಬಂಧವಾಗಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಿಮಿನಲ್ ಪ್ರಕ್ರಿಯ ಸಂಹಿತೆ 1973ರ ಕಲಂ 144ರನ್ವಯ ಮೇ 22ರ ಸಂಜೆ 6ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೂ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ಜಿಲ್ಲಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ, ಸಮಾರಂಭ, ವಾಹನ ಜಾಥಾ ಅಥವಾ ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು ನ್ಪೋಟಕ ಅಥವಾ ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ ಎಣಿಕಾ ಕೇಂದ್ರವಾದ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ತಂಗುವಿಕೆ, ಧ್ವನಿವರ್ಧಕಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.