ಗದಗ: ಸೆ. 25ರಿಂದ ಅಕ್ಟೋಬರ್ 15ರ ವರೆಗೆ ಮತದಾರ ಪಟ್ಟಿ ಪರಿಶೀಲನಾ ಕಾರ್ಯ ಜರುಗಲಿದೆ. 01-01-2020ಕ್ಕೆ 18 ವರ್ಷ ಪೂರ್ಣಗೊಳ್ಳುವ ಮತದಾರರು ತಮ್ಮನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳ್ಳಲು ಭಾರತ ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್ ಮೊಬೈಲ್ ಆ್ಯಪ್ ಪರಿಚಯಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮತದಾರರ ಪಟ್ಟಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿಕೊಳ್ಳಲು, ಹೆಸರನ್ನು ತೆಗೆದು ಹಾಕುವುದು, ದೃಢೀಕರಣ, ತಿದ್ದುಪಡಿಗಳಿಗಾಗಿ ಅರ್ಜಿಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಪಾಸ್‌ಪೋರ್ಟ್, ಚಾಲನಾ
ಪರವಾನಗಿ, ಆಧಾರ್ ಪತ್ರ, ಪಡಿತರ ಚೀಟಿ, ಸರಕಾರಿ, ಅರೆ ಸರಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ದಾಖಲೆಗಳನ್ನು ಇವುಗಳಲ್ಲಿ ಒಂದನ್ನು ದಾಖಲೆ ರೂಪದಲ್ಲಿ ಮೊಬೈಲ್ ಆ್ಯಪ್ ಮೂಲಕ ಅಪ್ ಲೋಡ್ ಮಾಡಬಹುದು ಎಂದು ತಿಳಿಸಿದರು.
ಈ ಮೊಬೈಲ್ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಪಡೆದುಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದ ಅಂಗವಾಗಿ ಈಗಾಗಲೇ ನೋಂದಾಣಿಯಾಗಿರುವ ಮತದಾರರು ತಮ್ಮ ಹಾಗೂ ಕುಟುಂಬ ಸದಸ್ಯರುಗಳ ಹೆಸರುಗಳ ಸರಿಯಾಗಿ ನೋಂದಣಿಯಾಗಿರುವ ಬಗ್ಗೆ ಆಯೋಗದ ವೆಬ್‌ಸೈಟ್ ಎನ್.ವಿ.ಎಸ್.ಪಿ ಪೋರ್ಟಲ್, ಮತದಾರರ 1950 ಸಹಾಯವಾಣಿಗೆ ಕರೆ ಮಾಡಿ ಅಥವಾ ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಕಚೇರಿ, ಅಟಲ್ ಜನ ಸ್ನೇಹಿ ಕೇಂದ್ರ, ಗ್ರಾ.ಪಂ.ಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ಅಲ್ಲದೆ ಮತಗಟ್ಟೆ ಅಧಿಕಾರಿ ಬಳಿ ಇರುವ ಮತದಾರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜುಗಳ ಮುಖ್ಯಸ್ಥರು ಇದ್ದರು.