ವಿಟ್ಲ: ಸಂಪರ್ಕಕ್ಕೆ ರಸ್ತೆಯೇ ಇಲ್ಲದ, ತೀರಾ ಕಡೆಗಣಿಸಲ್ಪಟ್ಟ ಮಾಣಿಲ ಗ್ರಾಮವನ್ನು 80ರ ದಶಕದಲ್ಲಿ ಕುಗ್ರಾಮವೆಂದು ಗುರುತಿಸಿದ್ದು ಉದಯವಾಣಿ. ಆ ಬಳಿಕ ಗ್ರಾಮ ಸುಗ್ರಾಮವಾಗಿದೆ. ಯಥೇಚ್ಛ ಅನುದಾನಗಳ ಮಹಾಪೂರವೇ ಬಂದಿದೆ. ಆ ಬಳಿಕ ಸಂಚಾರ ಸಂಪರ್ಕ, ಸಾರಿಗೆ, ವಿದ್ಯುತ್ ಮೊದಲಾದ ಮೂಲಭೂತ ಆವಶ್ಯಕತೆಗಳು ತಲುಪಿದೆ. ಆದರೂ ಇನ್ನಷ್ಟು ಕೊರತೆಗಳನ್ನು ನಿಭಾಯಿಸಬೇಕಾಗಿದೆ. ಆದುದರಿಂದ ಜ. 21ರಂದು ಮಾಣಿಲ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯವು ವಿಶೇಷ ಮಹತ್ವ ಪಡೆದಿದೆ.
ಮಾಣಿಲ ಗ್ರಾಮವು ಬಂಟ್ವಾಳ ತಾ| ಕೇಂದ್ರದಿಂದ 45 ಕಿ.ಮೀ. ಮತ್ತು ಜಿಲ್ಲಾ ಕೇಂದ್ರದಿಂದ 70 ಕಿ.ಮೀ. ದೂರದಲ್ಲಿದೆ. ವಿಟ್ಲ ಹೋಬಳಿಯಲ್ಲಿರುವ ಗ್ರಾಮವಾದ್ದರಿಂದ ಗ್ರಾಮಸ್ಥರು ವಿಟ್ಲವನ್ನು ತಾ| ಕೇಂದ್ರವಾಗಿಸಬೇಕೆಂಬ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹೋರಾಟ ಮಾಡುತ್ತಲೇ ಬಂದಿದ್ದಾರೆ. ಮುರುವ ನಡುಮನೆ ಮಹಾಬಲ ಭಟ್ ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ.
ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಮಾಣಿಲ ಗ್ರಾಮ ಮತ್ತು ಪೆರುವಾಯಿ ಗ್ರಾಮ ಸೇರಿ ಪೆರುವಾಯಿ ಗ್ರಾ.ಪಂ. ಆಗಿತ್ತು. ಮಾಣಿಲವು ಗ್ರಾ.ಪಂ. ಆಗಿ ಭಡ್ತಿ ಹೊಂದಿದ್ದು 5 ವರ್ಷಗಳ ಹಿಂದೆ. ಸ್ವಂತ ಅಸ್ತಿತ್ವ ಬಂದ ಬಳಿಕ ಮಾಣಿಲ ಗ್ರಾಮಕ್ಕೆ ಅನುದಾನಗಳು ಬಂದಿವೆ. ಅಲ್ಲಲ್ಲಿ ರಸ್ತೆ ನಿರ್ಮಾಣವಾಗಿದೆ. ಶೌಚಾಲಯ, ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಉತ್ತಮವಾಗಿದೆ. ಆದರೆ ಜನಸಂಖ್ಯೆ ಹೆಚ್ಚಿದಂತೆ ಬೇಡಿಕೆಗಳು, ಆವಶ್ಯಕತೆಗಳು ಹೆಚ್ಚಾಗುತ್ತವೆ. ಕೇರಳ ಸಂಪರ್ಕ ಅತೀ ಅಗತ್ಯವೆನಿಸಿಬಿಟ್ಟಿದೆ. ಅದಕ್ಕಾಗಿ ಬೃಹತ್ ಸೇತುವೆ ನಿರ್ಮಾಣವಾಗಬೇಕಾಗಿದೆ.
ಮುರುವದಲ್ಲಿ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಮಾಣಿಲ ಸರಕಾರಿ ಪ್ರೌಢಶಾಲೆಗೆ ಸಾಗುವ ಸಾರ್ವಜನಿಕ ಕಾಲುದಾರಿಯ ಕಾಲು ಸಂಕದ ಆವಶ್ಯಕತೆಯಿದೆ. ಮಾಣಿಲದ ನೇತ್ರಾವತಿ ಸಂಜೀವಿನಿ ಒಕ್ಕೂಟ ಸೋದ್ಯೋಗ, ಹಾಲು ಡೇರಿ ಅವಶ್ಯವಿದೆ. ಮಾಣಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವಿಲ್ಲ. ಕೆಎಂಎಫ್ ಡೇರಿ ಬೇಕು. ಆಧಾರ ಕೇಂದ್ರ ಬೇಕು. ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಬೇಕು. ಓಟೆಪಡು³ ಪರಿಸರದಲ್ಲಿ ನ್ಯಾಯಬೆಲೆ ಅಂಗಡಿ ಬೇಕು. ಸಮುದಾಯ ಭವನ ಬೇಕು. ಗ್ರಾಮಕರಣಿಕರ ಕಚೇರಿ ನಿರ್ಮಾಣವಾಗಬೇಕು.
ಗ್ರಂಥಾಲಯ ಒದಗಿಸಬೇಕು. ಸಣ್ಣ ಉದ್ಯಮಗಳ ಸ್ಥಾಪನೆಯಾಗಬೇಕು. ಇಷ್ಟೆಲ್ಲ ಬೇಡಿಕೆಗಳನ್ನು ಹೊಂದಿರುವ ಗ್ರಾಮಸ್ಥರು ಮಾಣಿಲ ಪ್ರಗತಿ ಹೊಂದಿದ ಬಗ್ಗೆ ಸಂತೃಪ್ತಿಯನ್ನು ಹೊಂದಿದ್ದಾರೆ. ಆದರೆ ತೀರಾ ಹಳ್ಳಿಯಾಗಿ ಸಂಪರ್ಕಕ್ಕೆ ದೂರವಾಗಿರುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕೆನ್ನುತ್ತಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆಯಿದೆ. ಪ.ಪೂ. ಕಾಲೇಜು ಬೇಡಿಕೆಯಿದೆ. ಹಂತ ಹಂತವಾಗಿ ಪದವಿ ಕಾಲೇಜಿನ ಬೇಡಿಕೆಯೂ ಸೇರಿಕೊಳ್ಳುತ್ತದೆ. ಕೃಷಿಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಸರಕಾರ ಹೆಚ್ಚು ಗಮನಹರಿಸಬೇಕಾಗಿದೆ. ರೈತರು ಅಡಿಕೆಗೆ ಎಲೆಚುಕ್ಕಿ ರೋಗ ಬಂದು ಕಂಗಾಲಾಗಿದ್ದಾರೆ. ಅದಕ್ಕೆ ಸರಕಾರ ಸ್ಪಂದಿಸಬೇಕು. ಅಡಿಕೆ, ಕೃಷ್ಯುತ್ಪನ್ನಗಳ ಮಾರಾಟಕ್ಕೂ 25 ಕಿ.ಮೀ. ದೂರ ಕ್ರಮಿಸಬೇಕಾಗಿರುವುದು ಕೂಡ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದೆ.
ಬೇಡಿಕೆಗಳು
1)ಮಾಣಿಲ ಗ್ರಾಮದ ಪಳನೀರು ಎಂಬಲ್ಲಿ ಸೀರೆಹೊಳೆಗೆ ಸೇತುವೆ ನಿರ್ಮಾಣ (ಪೆರ್ಲಕ್ಕೆ ಅತೀ ಸಮೀಪ)
2)ಸುಸಜ್ಜಿತ ಹಿಂದೂ ರುದ್ರ ಭೂಮಿ ಬೇಕೆಂಬ ಬೇಡಿಕೆ 3ಜೂನಿಯರ್ ಕಾಲೇಜು ಆರಂಭ
4)ಮೆಸ್ಕಾಂ ಸಬ್‌ಸ್ಟೇಶನ್ ವ್ಯವಸ್ಥೆಯಾಗಬೇಕು.
5)ಸಮುದಾಯ ಭವನ, ಕ್ರೀಡಾಂಗಣ, ಪಶುಆಸ್ಪತ್ರೆ ಮತ್ತು ಸಾರ್ವಜನಿಕ ಉಪಯೋಗಕ್ಕೆ ಜಮೀನು ಕಾದಿರಿಸಬೇಕಾಗಿದೆ.
6)ಗ್ರಂಥಾಲಯವನ್ನು ಪೆರುವಾಯಿ ಗ್ರಾಮಕ್ಕೆ ಸ್ಥಳಾಂತರಿಸದಂತೆ ನಾಗರಿಕರ ಆಗ್ರಹ
7)ಪ್ರೌಢಶಾಲಾ ಸಂಪರ್ಕ ರಸ್ತೆಗೆ ಡಾಮರಿಗೆ ಬೇಡಿಕೆ
8)ಓಟೆಪಡ್ಪು ಸತ್ಯನಾರಾಯಣ ಭಜನಮಂದಿರ, ಮುರುವ ಅಯ್ಯಪ್ಪ ಸ್ವಾಮಿ ಭಜನ ಮಂದಿರಗಳ ಸಕ್ರಮೀಕರಣವಾಗಬೇಕಾಗಿದೆ.
9)ಸರಕಾರಿ ಪ್ರೌಢಶಾಲೆ ಮಾಣಿಲಕ್ಕೆ ಸುಸಜ್ಜಿತ ಕ್ರೀಡಾಂಗಣ
ಆಸ್ಪತ್ರೆ ಬೇಕು
ಸ್ಕ್ಯಾನಿಂಗ್, ಡಯಾಲಿಸಿಸ್ ವ್ಯವಸ್ಥೆ ಹೊಂದಿರುವ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಉತ್ತಮ ಆಸ್ಪತ್ರೆ ಬೇಕು. ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ಭಡ್ತಿ ಹೊಂದಬೇಕು. ಪೂವನಡ್ಕ ಸೇತುವೆ ನಿರ್ಮಾಣವಾಗಬೇಕು. ಆ ಬಗ್ಗೆ ಪ್ರಯತ್ನವಾಗುತ್ತಿದ್ದು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.
-ರಾಜೇಶ್ ಕುಮಾರ್ ಬಾಳೆಕಲ್ಲು, ಉಪಾಧ್ಯಕ್ಷರು, ಮಾಣಿಲ ಗ್ರಾ.ಪಂ.
*ಉದಯಶಂಕರ್ ನೀರ್ಪಾಜೆ