ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕಾದರೆ ಬಲಿಜ ಸಮುದಾಯದ ಮುಖಂಡರು ಮತ್ತು ಜನರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕೆಂದು ಬಲಿಜ ಮಹಾ ಸಭಾ ರಾಜ್ಯಾಧ್ಯಕ್ಷ, ಸಂಸದ ಪಿ.ಸಿ ಮೋಹನ್ ತಿಳಿಸಿದರು.
ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಡಿ.31 ರಂದು ನಡೆಯಲಿರುವ ಜಿಲ್ಲಾ ಬಲಿಜ ಬೃಹತ್ ಸಮಾವೇಶ ಹಾಗೂ ಕೈವಾರ ತಾತಯ್ಯ ಆರಾಧನೆ ಕುರಿತು ನಗರದಲ್ಲಿ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ಒಡಕು, ಭಿನ್ನಾಭಿಪ್ರಾಯಗಳಿಲ್ಲದೆ ಒಮ್ಮತ ಮತ್ತು ಒಗ್ಗಟ್ಟಿನಿಂದ ಮುಂದುವರಿದು ತಮಗೆ ಬರಬೇಕಾದ ಹಕ್ಕು, ಸೌಲಭ್ಯ ಪಡೆಯಬೇಕು. ಇತರೆ ಸಮುದಾಯಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಚುನಾವಣೆ ವೇಳೆ ಎಲ್ಲವನ್ನೂ ಮರೆತು ತಮ್ಮ ಸಮುದಾಯದ ಮುಖಂಡರನ್ನು ಒಮ್ಮತ ದಿಂದ ಆಯ್ಕೆ ಮಾಡಿ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಸಮುದಾಯದ ಪ್ರಶ್ನೆ ಬಂದಾಗ ರಾಜಕೀಯವನ್ನು ದೂರವಿಡಬೇಕು ಎಂದರು.
ಬಲಿಜ ಮುಖಂಡ ರಾಮಲಿಂಗಪ್ಪ ಮಾತನಾಡಿ, ಬಲಿಜ ಸಮುದಾಯ “2 ಎ’ ವರ್ಗದ ಮೀಸಲಾತಿಯಡಿ ಶೈಕ್ಷಣಿಕವಾಗಿ ಮಾತ್ರ ಸೌಲಭ್ಯ ಪಡೆಯುತ್ತಿದೆ. ಈಗ ಶಿಕ್ಷಣಕ್ಕೆ ದೊರೆಯುತ್ತಿರುವ 2ಎ ವರ್ಗದ ಮೀಸಲಾತಿ ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೂ ಅನ್ವಯಿಸುವಂತಾಗಬೇಕು.
ಸಮುದಾಯದ ಶಕ್ತಿ ಸಾಮರ್ಥಯ ಮತ್ತು ಸಂಖ್ಯಾಬಲವನ್ನು ಪ್ರದರ್ಶಿಸಬೇಕು. ಬಲಿಜ ಸಮುದಾಯ ಹೆಚ್ಚು ಜನಸಂಖ್ಯೆ ಒಳಗೊಂಡಿದ್ದರೂ ಒಗ್ಗಟ್ಟಿನ ಕೊರತೆಯಿಂದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ರಾಜಕೀಯ,
ಸಾಮಾಜಿಕ ಹಾಗೂ ಆರ್ಥಿಕ ರಂಗದಲ್ಲೂ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮುದಾಯ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕ ಗುಡಿಬಂಡೆ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ 2ಎ ಮೀಸಲಾತಿ ನೀಡಿದಲ್ಲಿ ಸಮುದಾಯವು ಅಭಿವೃದ್ಧಿ ಹೊಂದಲಿದ್ದು, ಈ ಬಗ್ಗೆ ಇತ್ತಿಚೆಗೆ ಬೆಂಗಳೂರಿನಲ್ಲಿ ಬೃಹತ್ ಬಲಿಜ ಸಮಾವೇಶವನ್ನು ನಡೆಸುವ ಮೂಲಕ ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಕ್ಕೆ 2ಎ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ನೀಡುವಂತೆ ಆಗ್ರಹಿಸಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲೆಯ ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ ತಾಲೂಕುಗಳಿಂದ ಬಲಿಜ ಮುಖಂಡರು ಉಪಸ್ಥಿತರಿದ್ದರು.