Advertisement

ಕಬಡ್ಡಿಗೆ ರಾಷ್ಟ್ರಮಟ್ಟದ ಮನ್ನಣೆ: ಕಾಮತ್‌

06:36 AM Jan 07, 2019 | |

ಮಹಾನಗರ: ಕಬಡ್ಡಿ ಈ ಮಣ್ಣಿನ ದೇಶೀಯ ಕ್ರೀಡೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಬಡ್ಡಿಗೆ ಶಕ್ತಿ ತುಂಬುವ ಕೆಲಸಗಳು ನಡೆಯುತ್ತಿವೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು. ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಮತ್ತು ಮಂಗಳೂರು ತಾಲೂಕು ನಗರ ಅಮೆಚೂರು ಕಬಡ್ಡಿ ಸಂಸ್ಥೆ ಸಹಯೋಗದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಮಹಿಳೆರ ಮತ್ತು ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ 2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಉಭಯ ಜಿಲ್ಲೆಗಳ ಅನೇಕ ಕಬಡ್ಡಿ ಆಟಗಾರರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪ್ರತಿಭೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಅಮೆಚೂರು ಕಬಡ್ಡಿ ಸಂಸ್ಥೆ ಮಾಡುತ್ತಿದೆ. ಕಬಡ್ಡಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಮಮತಾ ಪೂಜಾರಿ ಕರಾವಳಿಯವರು ಎಂಬುವುದು ಹೆಮ್ಮೆಯ ಸಂಗತಿ. ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಕ್ರೀಡಾಪಟುಗಳಿಗೆ ಅವಕಾಶ ದೊರಕುತ್ತದೆ ಎಂದು ತಿಳಿಸಿದರು.

ಹಿಂದಿನ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಕಬಡ್ಡಿ ಕ್ರೀಡೆಯಲ್ಲಿ ತುಂಬಾ ವ್ಯತ್ಯಾಸಗಳಾಗಿವೆ. ಇತ್ತೀಚೆಗೆ ಪ್ರೊ ಕಬಡ್ಡಿ ಲೀಗ್‌ ಪ್ರಾರಂಭವಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಯಾಗಿದೆ. ಜತೆಗೆ ಹಳ್ಳಿ ಹಳ್ಳಿಗಳಿಗೂ ಕಬಡ್ಡಿ ಕ್ರೀಡೆ ತಲುಪುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಧನಾತ್ಮಕ ಚಿಂತನೆ ಅಗತ್ಯ
ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ, ನಮ್ಮಲ್ಲಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳಬೇಕು. ದೇಶದ ಏಳಿಗೆಗಾಗಿ ತಂಡವಾಗಿ ಕೆಲಸ ಮಾಡಬೇಕು. ಇಂದಿನ ಹೆತ್ತವರು ತಮ್ಮ ಮಕ್ಕಳನ್ನು ಕೇವಲ ಒಳಾಂಗಣ ಕ್ರೀಡೆಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಜಿಲ್ಲಾ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಅಮರನಾಥ ರೈ, ಸಂಘಟನೆ ಪ್ರಮುಖರಾದ ಪುರುಷೋತ್ತಮ ಪೂಜಾರಿ, ಪ್ರೇಮಾನಂದ ಉಳ್ಳಾಲ, ಕೃಷ್ಣಾನಂದ ರಾವ್‌, ಪ್ರವೀಣ್‌ ಚಂದ್ರ ಆಳ್ವ, ಗಿರಿಧರ ಶೆಟ್ಟಿ ಮೊದಲಾದವರಿದ್ದರು.

Advertisement

ಜಿಲ್ಲಾ 22 ತಂಡಗಳು ಭಾಗಿ
ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಯ 22 ತಂಡಗಳು ಭಾಗಿಯಾಗಿದ್ದವು. 17 ಪುರುಷರ ತಂಡ ಮತ್ತು 9 ಮಹಿಳೆಯರ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ತಲಾ 20 ಸಾವಿರ ರೂ., 15 ಸಾವಿರ ರೂ., 10ಸಾವಿರ ರೂ., ನಗದು ಟ್ರೋಫಿ ಹಾಗೂ ಪ್ರಶಸ್ತಿಫಲಕ, ಇದರೊಂದಿಗೆ ಉತ್ತಮ ಸವ್ಯಸಾಚಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರರಿಗೆ ಟ್ರೋಫಿ, ಉತ್ತಮ ಶಿಸ್ತಿನ ತಂಡಕ್ಕೂ ಟ್ರೋಫಿ ಬಹುಮಾನವಾಗಿ ನೀಡಲಾಯಿತು.

ಕಬಡ್ಡಿ ಮ್ಯಾಟ್‌ಗೆ ಅನುದಾನ 
ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ನಾನು ಕೂಡ ಕಬಡ್ಡಿ ಅಭಿಮಾನಿಯಾಗಿದ್ದು,
ಫೆಬ್ರವರಿಯಲ್ಲಿ ಬರುವ ಶಾಸಕರ ಅನುದಾನದಲ್ಲಿ ಕಬಡ್ಡಿ ಮ್ಯಾಟ್‌ಗೆ ಹಣ ಮೀಸಲಿಡುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next