Advertisement

ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

11:51 AM Feb 23, 2019 | |

ಹಾವೇರಿ: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ನಾಗರಿಕರು ಹಾಗೂ ಅಧಿಕಾರಿ ವರ್ಗ ನೀತಿ ಸಂಹಿತೆ ಪಾಲನೆ ಮಾಡಬೇಕು. ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಎಂ.ವಿ. ವೆಂಕಟೇಶ್‌ ತಿಳಿಸಿದರು.

Advertisement

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣೆ ನೀತಿ ಸಂಹಿತೆ, ವಿವಿಧ ಪ್ರಚಾರ ಸಾಮಗ್ರಿ ಹಾಗೂ ಸಭೆ-ಸಮಾರಂಭಗಳಿಗೆ ಬಳಸುವ ವಸ್ತುಗಳು, ವಾಹನಗಳಿಗೆ ನಿಗದಿಪಡಿಸಿದ ದರ ಹಾಗೂ ರಾಜಕೀಯ ಪ್ರಚಾರ ಸಭೆಯ ಅನುಮತಿಯ ಮಾರ್ಗಸೂಚಿಗಳ ಕುರಿತಂತೆ ಮನವರಿಕೆ ಮಾಡಿಕೊಟ್ಟರು. 

ನೀತಿ ಸಂಹಿತೆ ಜಾರಿಯಾದ ತಕ್ಷಣವೇ ಎಲ್ಲ ರಾಜಕೀಯ ಪಕ್ಷಗಳ ಹಾಗೂ ರಾಜಕೀಯ ಮುಖಂಡರು ಪ್ರಚಾರ ಸಾಮಗ್ರಿ-ಗೋಡೆ ಬರಹ ಒಳಗೊಂಡಿರುವ ಫಲಕಗಳನ್ನು ತೆರವುಗೊಳಿಸಬೇಕು. ಖಾಸಗಿ ಕಟ್ಟಡ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿರುವ ಯಾವುದೇ ರಾಜಕೀಯ ಪಕ್ಷಗಳ ಗೋಡೆಬರಹ, ಪ್ರಚಾರ ಫಲಕ, ಬ್ಯಾನರ್‌, ಬಾವುಟ ಸೇರಿದಂತೆ ತತಕ್ಷಣದಿಂದಲೇ ತೆರವುಗೊಳಿಸಬೇಕು. ಆದರೆ, ಚುನಾವಣೆ ಘೋಷಣೆಯಾದ ತರುವಾಯು ಅನುಮತಿ ಪಡೆದು ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಿಕೊಳ್ಳಬಹುದು. ಇದಕ್ಕೆ ಚುನಾವಣಾ ಆಯೋಗದ ನಿಗದಿಪಡಿಸಿದ ದರವನ್ನು ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

75 ಲಕ್ಷ ವೆಚ್ಚದ ಮಿತಿ: ಪ್ರತಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳಿಗೆ ಭಾರತೀಯ ಚುನಾವಣೆ ಆಯೋಗ 75 ಲಕ್ಷ ರೂ.ಗಳನ್ನು ಖರ್ಚು ಮಾಡಲು ನಿಗದಿಮಾಡಿದೆ. ಈ ವೆಚ್ಚದ ಮಿತಿಯಲ್ಲಿ ಖರ್ಚು ಮಾಡಬಹುದಾಗಿದೆ. ಕಾಲಕಾಲಕ್ಕೆ ವೆಚ್ಚ ವೀಕ್ಷಕರಿಗೆ ವೆಚ್ಚದ ವಿವರಗಳನ್ನು ಸಲ್ಲಿಸಬೇಕು. ಇದಕ್ಕಾಗಿ ಪ್ರತಿ ಅಭ್ಯರ್ಥಿಯು ರಿಜಿಸ್ಟರ್‌ಗಳನ್ನು ನಿರ್ವಹಿಸಿ ಲೆಕ್ಕ ಬರೆಯಬೇಕು ಎಂದು ತಿಳಿಸಿದರು.

ಏಕಗವಾಕ್ಷಿ ವ್ಯವಸ್ಥೆ: ರಾಜಕೀಯ ಸಭೆ-ಸಮಾರಂಭ, ಪ್ರಚಾರ ಸಾಮಗ್ರಿಗಳು, ಪತ್ರಿಕಾ ಜಾಹೀರಾತು, ಗಣ್ಯರಿಗೆ ಹೆಲಿಕ್ಯಾಪ್ಟರ್‌ ಬಳಕೆ, ಸೇರಿದಂತೆ ಅನುಮತಿ ನೀಡಲು ಏಕಗಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು. ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಅಧಿಕಾರಿಗಳ ಒಳಗೊಂಡ ತಂಡ ರಚಿಸಿ ಅನುಮತಿ ನೀಡಲು ಕ್ರಮವಹಿಸಲಾಗುವುದು. ಗಣ್ಯರ ಹೆಲಿಕ್ಯಾಪ್ಟರ್‌ ಬಳಕೆಗೆ ಮನವಿ ಸಲ್ಲಿಸಿ 24 ತಾಸಿನೊಳಗಾಗಿ ಅನುಮತಿ ನೀಡಲಾಗುವುದು. ಎಲ್ಲವೂ ಜಿಲ್ಲಾ ಚುನಾವಣಾ ಆಯೋಗದ ನಿಗದಿಪಡಿಸಿದ ಅಧಿಸೂಚಿತ ದರದಂತೆ ವೆಚ್ಚ ನಿಗದಿಪಡಿಸಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಸುವಿಧಾ-ಸಮಾಧಾನ:ಅನುಮತಿ ಮತ್ತು ದೂರಿಗಾಗಿ ‘ಸುವಿಧಾ ಮತ್ತು ಸಮಾಧಾನ’ ಎಂಬ ವೆಬ್‌ಸೈಟ್‌ ರೂಪಿಸಲಾಗಿದೆ. ಈ ಮೂಲಕವು ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ತ್ವರಿತವಾಗಿ ಅನುಮತಿ ನೀಡಬೇಕೆಂಬ ಉದ್ದೇಶದಿಂದ ವಾಹನ ಇತ್ಯಾದಿ ಬಳಕೆಗೆ ಅನುಮತಿ ನೀಡಲು ವಿಧಾನಸಭಾವಾರು ಸಮಿತಿಗಳನ್ನು ರಚಿಸಲಾಗಿದೆ. ಈ ಕಾರಣಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ಅನುಮತಿ ಕಡ್ಡಾಯ: ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ಪೂರ್ವಾನುಮತಿ ಕಡ್ಡಾಯ. ಹಾಗೆ ಪ್ರದರ್ಶಿಸಲು ನಗರಸಭೆ, ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆಯಬೇಕು. ಖಾಸಗಿ ಮನೆಯ ಮೇಲೂ ಪ್ರಚಾರ ಸಾಮಗ್ರಿಗಳನ್ನು ಬಳಸಬಹುದು. ಆದರೆ, ಮನೆಯ ಮಾಲೀಕನ ಅನುಮತಿ ಪತ್ರ ಪಡೆಯುವುದು ಕಡ್ಡಾಯ. ಈ ಎಲ್ಲ ಸಾಮಗ್ರಿಗಳಿಗೂ ನಿಗದಿತ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೆ ಹಾಕಲಾಗುವುದು ಎಂದು ತಿಳಿಸಿದರು.

ದರ ನಿಗದಿ: ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತಿಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಅಂಗೀಕೃತ ಜಾಹೀರಾತು ದರ ನಿಗದಿಪಡಿಸಲಾಗಿದೆ. ಉಳಿದಂತೆ ಲೋಕೋಪಯೋಗಿ ಹಾಗೂ ಸಾರಿಗೆ ಇಲಾಖೆ ಸರ್ಕಾರಿ ನಿಗದಿತ ದರದಂತೆ ವಾಹನಗಳ ದರ, ಹೋಟೆಲ್‌ ಕೊಠಡಿಗಳ ದರ, ಕುಡಿಯುವ ನೀರು, ಪ್ರಚಾರ ಸಾಮಗ್ರಿ, ವೇದಿಕೆ ದರಗಳ ಮಾಹಿತಿಯನ್ನು ರಾಜಕೀಯ ಪಕ್ಷದ ಮುಖಂಡರಿಗೆ ವಿವರಿಸಿ ಅಂತಿಮಗೊಳಿಸಲಾಯಿತು.

ಸಭೆಯಲ್ಲಿ ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ಶಾಸಕ ನೆಹರು ಓಲೇಕಾರ, ಪ್ರಭು ಹಿಟ್ನಳ್ಳಿ, ಶಿವಲಿಂಗಪ್ಪ ಎಂ.ತಲ್ಲೂರ, ಶಂಕರಗೌಡ ಪಾಟೀಲ, ಬಸಂತಕುಮಾರ ಸವಣೂರ, ವಿರೇಂದ್ರ ವಿ.ಶೆಟ್ಟರ, ಅಶೋಕ ಮರೆಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಸುಕುಮಾರ ತಳವಾರ, ಮಲ್ಲಿಕಾರ್ಜುನ ಆರ್‌.ಎಚ್‌., ಪ್ರಕಾಶ ಜೈನ್‌ ಇತರರು ಇದ್ದರು.

ಮತದಾರರಾಗಲು ಅವಕಾಶ
ಈಗಾಗಲೇ ಮತದಾರರ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ. ನಾಮಪತ್ರ ಸಲ್ಲಿಕೆಯ ಆರಂಭ ದಿನದ ಹತ್ತು ದಿನ ಹಿಂದಿನವರೆಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ನಮೂನೆ-6ನ್ನು ಭರ್ತಿಮಾಡಿ 18 ವರ್ಷದ ತುಂಬಿದ ಎಲ್ಲರೂ ಹೆಸರು ಸೇರಿಸಬಹುದು. ಬ್ಲಾಕ್‌ ಮಟ್ಟದ ಮತಗಟ್ಟೆ ಅಧಿಕಾರಿಗಳ ಬಳಿಯೂ ಅರ್ಜಿ ನಮೂನೆಗಳು ಲಭ್ಯವಿದ್ದು, ಅಲ್ಲಿಯೂ ಸಹ ಅವರನ್ನು ಸಂಪರ್ಕಿಸಿ ಮತದಾರರಾಗಿ ಸೇರ್ಪಡೆಮಾಡಿಕೊಳ್ಳಬಹುದು. ಒಂದೊಮ್ಮೆ ಒಬ್ಬನೇ ಮತದಾರ ಎರಡು ಕಡೆ ಹೆಸರು ಇದ್ದರೆ ಖಚಿತ ಮಾಹಿತಿ ನೀಡಿದರೆ ತೆಗೆದುಹಾಕಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ವೆಂಕಟೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next