ವೀರೇಶ ಮಡ್ಲೂರ
ಹಾವೇರಿ: ಮುಂಗಾರು ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಎದುರಿಸಲು ಕೋವಿಡ್ ಸಂಕಷ್ಟ ಕಾಲದಲ್ಲಿಯೇ ಹತ್ತು ಹಲವು ಪೂರ್ವ ಸಿದ್ಧತೆಯೊಂದಿಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ.
ಜಿಲ್ಲಾಡಳಿತ ತಾಲೂಕು ಆಡಳಿತದೊಂದಿಗೆ ಈಗಾಗಲೇ ಸಭೆ ನಡೆಸಿ ಮಳೆಗಾಲದಲ್ಲಿ ಎದುರಾಗುವ ವಿಪತ್ತು ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ, ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ರಕ್ಷಣೆ ನೀಡಲು ವ್ಯವಸ್ಥಿತ ಯೋಜನೆ ರೂಪಿಸುವುದು, ಸಂಕಷ್ಟಕ್ಕೆ ತುತ್ತಾಗುವ ಮುಂಚಿತವಾಗಿಯೇ ಪರ್ಯಾಯವಾಗಿ ಕಾಳಜಿ ಕೇಂದ್ರಗಳನ್ನು ಗುರುತಿಸಿ ಮೂಲಸೌಕರ್ಯಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುವುದು, ನೋಡೆಲ್ ಅ ಧಿಕಾರಿಗಳನ್ನು ನೇಮಿಸಿ ಪ್ರವಾಹ ಇತರೆ ಸಂಕಷ್ಟಕ್ಕೆ ತುತ್ತಾಗುವ ಮುನ್ನವೇ ಗ್ರಾಮಸ್ಥರನ್ನು ಸ್ಥಳಾಂತರಿಸುವುದು, ಸಾರ್ವಜನಿಕ ಸಂಪರ್ಕಕ್ಕಾಗಿ ಹೆಲ್ಪ್ಲೈನ್ ನಂಬರ್ ಗಳನ್ನು ಮಾಹಿತಿಗಾಗಿ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ.
141 ಪ್ರವಾಹ ಪೀಡಿತ ಗ್ರಾಮಗಳು: ಜಿಲ್ಲೆಯಲ್ಲಿ 141 ಗ್ರಾಮಗಳು ತಗ್ಗು ಪ್ರದೇಶಗಳಲ್ಲಿದ್ದು, ಪ್ರವಾಹದಿಂದ ಮುಳುಗಡೆ ಸಮಸ್ಯೆ ಎದುರಿಸಲಿವೆ ಎಂದು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ. ಜಿಲ್ಲೆಯ ಹಾವೇರಿ ತಾಲೂಕಿನ 33 ಗ್ರಾಮ, ರಾಣಿಬೆನ್ನೂರು ತಾಲೂಕಿನ 28, ಬ್ಯಾಡಗಿ 7, ರಟ್ಟಿಹಳ್ಳಿ 3, ಸವಣೂರು 15, ಹಾನಗಲ್ಲ 23, ಶಿಗ್ಗಾವಿ ತಾಲೂಕಿನ 32 ಗ್ರಾಮಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ ಭೀತಿ ಎದುರಿಸುವ ಗ್ರಾಮಗಳೆಂದು ಜಿಲ್ಲಾಡಳಿತ ಗುರುತಿಸಿದೆ. ಅಲ್ಲದೇ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆ, ಕಾಲೇಜು, ಕಚೇರಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಕೆರೆ ದಂಡೆಗಳ ಮಾಹಿತಿ ಸಂಗ್ರಹಿಸಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ.
ಅಗತ್ಯ ವಸ್ತುಗಳ ಖರೀದಿಗೆ ಸೂಚನೆ: ಪ್ರವಾಹದಂತಹ ಅವಘಡ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಅಗತ್ಯವಾದ ಬೋಟ್‌ಗಳ ವ್ಯವಸ್ಥೆ, ರಕ್ಷಣಾ ಉಪಕರಣಗಳೊಂದಿಗೆ ಸಿದ್ಧವಾಗಿರಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಸಜ್ಜಾಗಿದೆ. ಜಿಲ್ಲೆಯ 7 ಅಗ್ನಿಶಾಮಕ ಠಾಣೆಗಳಲ್ಲಿ 7 ಜನರೇಟರ್, 14 ಪೋರ್ಟೆಬಲ್ ಪಂಪ್, 105 ರೈನ್‌ಕೋಟ್, 73 ಲೈಫ್ ಜಾಕೆಟ್, 70 ಫೈಬರ್ ರಿಂಗ್, 30 ಪಾತಾಳ ಗರಡಿ, 1 ಬೋಟ್ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ 2 ಬೋಟ್, 50 ರೈನ್‌ಕೋಟ್, 50 ಲೈಫ್ ಜಾಕೆಟ್, 20 ರೀಚಾಜೇìಬಲ್ ಟಾಚ್ ìಗಳನ್ನು ಜಿಲ್ಲೆಗೆ ಪೂರೈಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿ ಕಾರಿ ಸೋಮಶೇಖರ ಅಂಗಡಿ ತಿಳಿಸಿದ್ದಾರೆ.
ಅಗತ್ಯ ಬಿತ್ತನೆ ಬೀಜ-ಗೊಬ್ಬರ ದಾಸ್ತಾನು: ಅತಿವೃಷ್ಟಿ ಹಾಗೂ ನೆರೆ ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗುವ ರೈತರ ಕಾಳಜಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ 3.30 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದೆ. ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ-ರಸಗೊಬ್ಬರವನ್ನು ದಾಸ್ತಾನು ಮಾಡುವಲ್ಲಿ ಇಲಾಖೆ ನಿರತವಾಗಿದೆ. ಕಳೆದ ಬಾರಿ 3,30,713 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಮೂಲಕ ಶೇ.99 ಸಾಧನೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ 15-18 ಸಾವಿರ ಮೆಟ್ರಿಕ್ ಡಿಎಪಿ ಗೊಬ್ಬರ ಬೇಡಿಕೆ ಇದ್ದು, ಈಗಾಗಲೇ ಅಂದಾಜು 15 ಸಾವಿರ ಮೆಟ್ರಿಕ್ ಟನ್‌ನಷ್ಟು ಗೊಬ್ಬರ ದಾಸ್ತಾನಿದೆ. ಜೂನ್-ಜುಲೈನಲ್ಲಿ ನಿಗ ದಿಯಾದ ಗೊಬ್ಬರ ಹಂಚಿಕೆಯನ್ನು ತಿಂಗಳ ಮೊದಲ ವಾರದಲ್ಲಿ ಪೂರೈಸಲಾಗಿದೆ. ಪ್ರಸಕ್ತ ಮುಂಗಾರು ಸಾಲಿನಲ್ಲಿ 26,635 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಹಂಚಿಕೆಯಾಗಿದೆ. ಈ ವರ್ಷ 6,323 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಈಗಾಗಲೇ 5745 ಮೆಟ್ರಿಕ್ ಟನ್ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ 9416 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಭತ್ತ, ಜೋಳ, ಹೈಬ್ರಿಡ್ ಗೋವಿನಜೋಳ, ಹೆಸರು, ತೊಗರಿ, ಅಲಸಂದಿ, ಶೇಂಗಾ, ಸೂರ್ಯಕಾಂತಿ, ಸೋಯಾ ಅವರೆ ಸೇರಿದಂತೆ 33,650 ಕ್ವಿಂಟಲ್ ಬೇಡಿಕೆ ಇದೆ. 30,651 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. 7,365 ಕ್ವಿಂಟಲ್ ವಿತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.