Advertisement

“ಮರಳು ನೀತಿ ರೂಪಿಸುವಲ್ಲಿ ಜಿಲ್ಲಾಡಳಿತ, ಸರಕಾರ ಸಂಪೂರ್ಣ ವಿಫ‌ಲ’

09:42 PM Mar 23, 2019 | Team Udayavani |

ಕಾರ್ಕಳ : ಮರಳು ನೀತಿ ಕುರಿತಂತೆ ಸ್ಪಷ್ಟವಾದ ನಿಲುವು ತಳೆಯುವಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫ‌ಲವಾಗಿದ್ದು, ಮರಳಿನ ಅಭಾವಕ್ಕೆ ನೇರ ಹೊಣೆಯಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಆರೋಪಿಸಿದರು.

Advertisement

ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಜನರಿಗೆ ಸುಲಭವಾಗಿ ಮರಳು, ಕಲ್ಲು ಪಡೆಯಲು ಸಹಕಾರಿಯಾಗುವಂತಹ ಯಾವುದೇ ಕ್ರಮವನ್ನು ಜಿಲ್ಲಾಡಳಿತವಾಗಲೀ ಅಥವಾ ರಾಜ್ಯ ಸರಕಾರವಾಗಲಿ ಕೈಗೊಂಡಿಲ್ಲ.
 
ಈ  ನಿಟ್ಟಿನಲ್ಲಿ ಮುಖ್ಯಮಂತ್ರಿ, ಗಣಿಗಾರಿಕೆ ಸಚಿವರನ್ನು ಭೇಟಿ ಮಾಡಿ ಜನರ ಸಮಸ್ಯೆ ಕುರಿತು ಮನವರಿಕೆ ಮಾಡಿದ್ದಾಗ್ಯೂ ಪ್ರಯೋಜನವಾಗಿಲ್ಲ ಎಂದು  ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಪಂದನೆಯಿಲ್ಲ
ಮನೆ ನಿರ್ಮಾಣ, ಸರಕಾರಿ ಕಾಮಗಾರಿಗಳು ಮರಳು, ಕಲ್ಲಿನ ಅಭಾವದಿಂದಾಗಿ ಸ್ಥಗಿತಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು, ವ್ಯಾಪಾರಿಗಳು, ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ  ಕಳೆದ 10 ತಿಂಗಳ ಅವಧಿಯಲ್ಲಿ ಅದೆಷ್ಟೋ ಬಾರಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿ, ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ, ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

6 ಕಡೆ ಮಾತ್ರ ಮರಳುಗಾರಿಕೆ
ತಾ.ಪಂ., ಗ್ರಾ.ಪಂ. ಸಹಕಾರದೊಂದಿಗೆ ಸುಮಾರು 20 ಕಡೆಗಳಲ್ಲಿ ಮರಳುಗಾರಿಕೆ ನಡೆಸಬಹುದೆಂದು ಸ್ಥಳಗಳನ್ನು ಗುರುತಿಸಿದ್ದರೂ ಮುಂಡ್ಕೂರು, ಕಸಬಾ, ಕೌಡೂರು, ಮುದ್ರಾಡಿ ಸೇರಿದಂತೆ ಕೇವಲ 6 ಕಡೆಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಅಲ್ಲಿಂದ ಕೂಡ ಇಲಾಖೆ ಮರಳು ಪೂರೈಸಲು ಮುಂದಾಗಿಲ್ಲ ಎಂದು  ಹೇಳಿದರು.

ಮಂಗಳೂರಿನಿಂದ ಮರಳು
ಕಾರ್ಕಳ  ಪ್ರದೇಶಕ್ಕೆ ಈ ಹಿಂದೆ ಮಂಗಳೂರು ಭಾಗದಿಂದ ನಿಗದಿಪಡಿಸಿದ ದರ ಪಾವತಿಸಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಪೂರೈಕೆಯಾಗುತ್ತಿತ್ತು. 

Advertisement

ಆದರೆ, ಇದೀಗ ಅದಕ್ಕೂ ನಿರ್ಬಂಧ ಹೇರಲಾಗಿದೆ. ಕಾನೂನಿನ ನೆಪದಲ್ಲಿ ಮರಳು ಸಾಗಾಟದ ಲಾರಿಗಳಿಗೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ಕಾರ್ಕಳ ಭಾಗದ ಜನರಿಗೆ ಮರಳು ಸಿಗದಂತಾಗಿದೆ ಎಂದರು.

ಅಧಿಕಾರಿಗಳ ವರ್ತನೆ ಸಹಿಸಲು ಸಾಧ್ಯವಿಲ್ಲ
ಸ್ಥಳೀಯ ಹೊಳೆ, ತೋಡುಗಳಿಂದ ಬುಟ್ಟಿಗಳಲ್ಲಿ ಮರಳು ತೆಗೆದು ಸಾಗಾಟ ಮಾಡುವವರ ವಿರುದ್ಧವೂ ಮೊಕದ್ದಮೆ ಹೂಡಲಾಗುತ್ತಿದೆ. ಕಾನೂನಿನ ನೆಪದಲ್ಲಿ ಅಧಿಕಾರಿಗಳು ಅಮಾಯಕರನ್ನು ಸತಾಯಿಸುತ್ತಿದ್ದಾರೆ. ಹೊಸತಾಗಿ ಜಿಲ್ಲೆಗೆ ಬಂದ ಅಧಿಕಾರಿಗಳು ನಾಗರಿಕರೊಂದಿಗೆ ಸೌಜನ್ಯತೆಯೊಂದಿಗೆ ವರ್ತಿಸದೇ ಹದ್ದುಮೀರಿ ವರ್ತಿಸುತ್ತಿದ್ದಾÃÉ ಎಂದು  ಹೇಳಿದರು.

ಕ್ರಮಕ್ಕೆ ಆಕ್ಷೇಪವಿಲ್ಲ
ಮರಳು ದಂಧೆಕೋರರ ವಿರುದ್ಧ ಇಲಾಖೆ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನೀತಿ ಸಂಹಿತೆಯ ನೆಪವೊಡ್ಡಿ, ಮರಳು, ಜಲ್ಲಿ, ಕೆಂಪು ಕಲ್ಲು ಸಾಗಾಟದ ವೇಳೆ ಸಾಮಾನ್ಯ ಜನರಿಗೆ ತೊಂದರೆ ಕೊಡಬಾರದು. ಇದು ಸರಿಯಲ್ಲ . ಕಲ್ಲು ಗಣಿಗಾರಿಕೆ, ಮರಳುಗಾರಿಕೆಗಾಗಿ ಇರುವಂತಹ ಪರವಾನಿಗೆಯನ್ನು ಅರ್ಹರಿಗೆ ನೀಡಿ ಜನರಿಗೆ ಸುಲಭವಾಗಿ ಮರಳು ಕಲ್ಲು ದೊರೆಯುವಂತೆ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸುನಿಲ್‌ ಕುಮಾರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next