Advertisement

ಪಾಪನಾಶ ಕೆರೆಯಲ್ಲಿ ಶಿವನಮೂರ್ತಿ ನಿರ್ಮಾಣ

03:39 PM Dec 26, 2018 | Team Udayavani |

ಬೀದರ: ನಗರದ ಪುಣ್ಯ ಕ್ಷೇತ್ರವೆಂದು ಗುರುತಿಸಿಕೊಂಡ ಐತಿಹಾಸಿಕ ಪಾಪನಾಶ ದೇವಸ್ಥಾನ ಸಮೀಪದ ಕೆರೆಗೆ ಚರಂಡಿ ನೀರು ತುಂಬಿ ಗಬ್ಬು ನಾರುತ್ತಿರುವುದನ್ನು ಅರಿತ ಜಿಲ್ಲಾಡಳಿತ ಇದೀಗ ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, 50 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸುತ್ತಿದೆ.

Advertisement

ಕೆರೆಯ ಸುತ್ತಲಿನ ಪ್ರದೇಶದಲ್ಲಿ ಎತ್ತರದ ಗುಡ್ಡಗಾಡು ಪ್ರದೇಶ ಇರುವ ಕಾರಣ ಮಳೆಗಾಲದಲ್ಲಿ ಸುರಿಯುವ ನೀರು ಕೆರೆಗೆ ಸೇರುತ್ತದೆ. ಮಳೆ ನೀರು ಸೇರಿದರೆ ಪರವಾಗಿಲ್ಲ, ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ಹರಿದು ಕೆರೆ ಸೇರುತ್ತಿರುವುದರಿಂದ ಸಧ್ಯ ಜಲಚರ, ಪ್ರಾಣಿ, ಪಕ್ಷಿಗಳ ಜೀವಕ್ಕೆ ಹಾನಿ ಸಂಭವಿಸುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ಕೆರೆಯಲ್ಲಿನ ಅನೇಕ ಮೀನುಗಳು ಸಾವಿಗಿಡಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇಲ್ಲಿನ ಕೆರೆ ಅನೇಕ ದಶಕಗಳ ಇತಿಹಾಸ ಹೊಂದಿದೆ. ಕೆರೆಯ ಸುತ್ತಲಿನ ಪ್ರದೇಶದಲ್ಲಿ ಕಾಡು ಬೆಳೆದುಕೊಂಡಿದ್ದು, ಅನೇಕ ಪ್ರವಾಸಿಗರು ಈಕಡೆಗೆ ಹೆಚ್ಚಾಗಿ ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗಳು ಸಂಚರಿಸಲು ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣಗೊಂಡಿದೆ. ಗಿಡಗಂಟೆಗಳ ಮಧ್ಯದಲ್ಲಿ ವಿವಿಧ ಬಗೆಯ ಮದ್ಯದ ಬಾಟಲಿಗಳು ಕಂಡುಬರುತ್ತಿವೆ. ಕೆರೆಯಲ್ಲಿ ನಿಂತ ನೀರು ಗಬ್ಬು ವಾಸನೆ ಸೂಸುತ್ತಿದೆ.

ಬಳಕೆಯಾಗದ ನೀರು: ಅನೇಕ ವರ್ಷಗಳಿಂದ ಕೆರೆಯಲ್ಲಿನ ನೀರು ಕೇವಲ ಪಶು, ಪಕ್ಷಿಗಳು ಬಿಟ್ಟರೆ ಯಾವುದೇ ರೀತಿಯ ಬಳಕೆಗೆ ಬಳಸುತ್ತಿಲ್ಲ. ಪ್ರತಿ ನಿತ್ಯ ಅಧಿ ಕ ಪ್ರಮಾಣದಲ್ಲಿ ಚರಂಡಿ ನೀರು ಹರಿದು ಕೆರೆಗೆ ಸೇರುತ್ತಿದೆ. ಸದ್ಯ ಸಂಗ್ರಹವಾದ ನೀರನ್ನು ಜಿಲ್ಲಾಡಳಿತ ಈಗಾಗಲೇ ಖಾಲಿ ಮಾಡಲು ಶುರು ಮಾಡಿದೆ. ಆದರೆ, ಕೆಲವರು ಜಿಲ್ಲಾಡಳಿತ ಕ್ರಮ ಸರಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇನ್ನು ಅನೇಕರು ಕೊಳಚೆ ನೀರು ಖಾಲಿ ಮಾಡಿ ಅಭಿವೃದ್ಧಿ ಮಾಡದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿವೆ.

ಚರಂಡಿ ನೀರು ತಡೆಯಿರಿ: ಸದ್ಯ ಕೆರೆಗೆ ಸೇರುತ್ತಿರುವ ವಿವಿಧೆಡೆಯ ಕೊಳಚೆ ನೀರು ಕೆರೆಗೆ ಸೇರದಂತೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಧಿ ಕಾರಿಗಳ ಜತೆಗೆ ಚರ್ಚೆ ನಡೆಸಿರುವ ಜಿಲ್ಲಾಧಿಕಾರಿ ಡಾ| ಎಚ್‌. ಆರ್‌. ಮಹಾದೇವ, ಚರಂಡಿ ನೀರು ಕೆರೆಗೆ ಸೇರದ ರೀತಿಯಲ್ಲಿ ವ್ಯವಸ್ಥೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಕೊಳಚೆ ನೀರು ತಡೆದರೆ ಶಿವನ ಭಕ್ತರಿಗೆ ಇದು ಪುಣ್ಯ ಕೆರೆಯಾಗಿ ಭಕ್ತರ ಪಾಪನಾಶ ಮಾಡುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

Advertisement

ಕೆರೆ ಅಭಿವೃದ್ಧಿ: ಬೀದರ್‌ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕೆರೆಯನ್ನು ಜಿಲ್ಲಾಡಳಿತ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಶಿವ ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಿಯಾಯೋಜನೆ ತಯಾರಿಸಿಕೊಂಡಿದ್ದು, ಕೆಲ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ. ಕೆರೆಯಲ್ಲಿನ ಅಶುದ್ಧ ನೀರು ಖಾಲಿ ಮಾಡಿ, ಕಾಮಗಾರಿಯ ನಂತರ ಕೆರೆಗೆ ಬಾವಿ ನೀರು ಹರಿಸಿ 
ಕೆರೆ ನಿರ್ಮಾಣ ಮಾಡುವ ಆಲೋಚನೆಯನ್ನು ಜಿಲ್ಲಾಡಳಿತ ಮಾಡಿದೆ.

ಅನೇಕ ವರ್ಷಗಳಿಂದ ಕೆರೆ ಅಭಿವೃದ್ಧಿಗಾಗಿ ಜಿಲ್ಲೆಯ ಅನೇಕರು ಆಗ್ರಹಿಸಿದ್ದರು. ಇದೀಗ ಜಿಲ್ಲಾಡಳಿತ ಹೊಸ ಸ್ವರೂಪದೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿರುವುದು ಶಿವನ ಭಕ್ತರಲ್ಲಿ ಹರ್ಷ ತಂದಿದೆ. ಬರುವ ಮಳೆಗಾಲದ ಅವ ಧಿ ವರೆಗೆ ಕಾಮಗಾರಿ ಕೂಡ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಪನಾಶ ಕೆರೆ ಅಭಿವೃದ್ಧಿ ಕುರಿತು ಈ ಹಿಂದೆ ಅನೇಕರು ಒತ್ತಾಯಿಸಿದ್ದಾರೆ. ಇದೀಗ ಕೆರೆ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, 30 ಅಡಿ ಎತ್ತರದ ಶಿವಮೂರ್ತಿ ಬದಲಿಗೆ 50 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಲು ತೀರ್ಮಾನಿಸಲಾಗುತ್ತಿದೆ. ಪಾಪನಾಶ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಮಾಡುವ ಪರಿಕಲ್ಪನೆಯಲ್ಲಿ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಕೆರೆಯ ಮಧ್ಯದಲ್ಲಿ ಶಿವನ ಮೂರ್ತಿ, ವಾಕಿಂಗ್‌ ಪಾತ್‌, ಧ್ಯಾನಮಂದಿರ ಸೇರಿದಂತೆ ವಿದ್ಯುತ್‌ ಅಲಂಕಾರದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವ ಆಲೋಚನೆ ಇದೆ. ಈ ನಿಟ್ಟಿನಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು.
. ಡಾ| ಎಚ್‌.ಆರ್‌. ಮಹಾದೇವ,
  ಜಿಲ್ಲಾಧಿಕಾರಿ

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next