Advertisement

ಸಾಹಸಿ ಯುವಕರ ತಂಡಕ್ಕೆ ಜಿಲ್ಲಾಡಳಿತ ಅಭಿನಂದನೆ

11:18 PM Jul 17, 2020 | Hari Prasad |

ಯಾದಗಿರಿ: ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಪ್ರತಿಭೆಗಳು, ಸಾಹಸಿಗಳಿದ್ದರೂ ಅವರ ಪ್ರತಿಭೆ ಹೊರಬರುವುದು ತೀರಾ ಕಡಿಮೆ. ಅಷ್ಟೆಯಲ್ಲದೆ ಅವರಿಗೆ ಪ್ರಚಾರ ದೊರೆಯದೆ ಸಮಾಜದಲ್ಲಿ ಗುರುತಿಸಿಕೊಳ್ಳದೇ ಹಾಗೇ ಉಳಿದುಕೊಳ್ಳುತ್ತಾರೆ ಎನ್ನುವ ಮಾತು ಸುಳ್ಳಾಗುವಂತೆ ಜಿಲ್ಲಾಡಳಿತ ಸಾಹಸಿಗಳನ್ನು ಗುರುತಿಸಿ ಶ್ಲಾಘಿಸಿದೆ.

Advertisement

ಇದೇ ಜು.15ರಂದು ಯಾದಗಿರಿ ತಾಲ್ಲೂಕಿನ ಆಶನಾಳ ಗ್ರಾಮದ ಕೆಲ ಮಹಿಳೆಯರು ಸಮೀಪದ ಪಗಲಾಪುರ ಗ್ರಾಮದ ಹೊಲದಲ್ಲಿ ಕಳೆ ತೆಗೆಯಲು ತೆರಳಿದ್ದರು. ಭಾರಿ ಮಳೆಯಾಗಿದ್ದರಿಂದ ಕೂಲಿ ಕೆಲಸ ಮುಗಿಸಿ ಆಶನಾಳಕ್ಕೆ ಹಿಂದಿರುಗುವಾಗ ಮಾರ್ಗಮಧ್ಯದ ಪಗಲಾಪುರ ಗ್ರಾಮದ ಹಳ್ಳವನ್ನು ಮಹಿಳೆಯರು ಗುಂಪಾಗಿ ದಾಟಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಓರ್ವ ಮಹಿಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಳು. ಇದನ್ನು ಗಮನಿಸಿದ ಸಮೀಪದಲ್ಲಿದ್ದ ಯಾವುದೇ ತರಬೇತಿ ಪಡೆಯದ ಮತ್ತು ಪರಿಣಿತಿಯಿಲ್ಲದ ಯುವಕರು ತಮ್ಮ ಜೀವವನ್ನು ಲೆಕ್ಕಿಸದೆ ಕೂಡಲೇ ಹಳ್ಳದಲ್ಲಿ ಇಳಿದು ಈಜಿ ಮಹಿಳೆಯ ಜೀವ ರಕ್ಷಿಸುವ ಮೂಲಕ ಸಾಹಸ ಮೆರೆದ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಗ್ರಾಮೀಣ ಭಾಗದ ಸಾಹಸಿ ಪಗಲಾಪುರ ಗ್ರಾಮದ ಶಿವಪ್ಪ ಗುಂಜಲಪ್ಪ, ಭೀಮಪ್ಪ ಹುಸೇನಯ್ಯ ಗಡ್ಡದರ, ಕಿರಣ ಬಸಪ್ಪ, ಭೀಮಪ್ಪ ತಾತಳಗೇರ, ಮರೆಪ್ಪ ಬಾವೂರ, ಜಂಬಣ್ಣ ಸಾಬಣ್ಣ, ಮರಿಲಿಂಗಪ್ಪ ಸಾಬಣ್ಣ, ಹಾಗೂ ಅಶೋಕ ಭೀಮಣ್ಣರನ್ನು ಇದೀಗ ಜಿಲ್ಲಾಡಳಿತ ಗುರುತಿಸಿ ಅಭಿನಂದಿಸಿದ್ದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಯುವಕರ ಕಾರ್ಯವನ್ನು ಶ್ಲಾಘಿಸಿದ್ದು ಜಿಲ್ಲಾಡಳಿತದ ಕ್ರಮ ಸಾಕಷ್ಟು ಪ್ರಶಂಶೆ ವ್ಯಕ್ತವಾಗಿದೆ.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಾಹಸಿಗಳು, ಪ್ರತಿಭೆಗಳಿವೆ ಅಂತಹ ವ್ಯಕ್ತಿಗಳನ್ನು ಗುರುತಿಸುವುದರಿಂದ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜಿಲ್ಲಾಡಳಿತ ಪ್ರತಿಭೆಗಳನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸಂತಸದ ವಿಚಾರ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next