Advertisement

ಮತ್ತೆ ಆರು ಲಕ್ಷ ಸಸಿ ವಿತರಣೆ

12:09 PM May 22, 2018 | |

ಬೆಂಗಳೂರು: ಮತ್ತೂಮ್ಮೆ ರಾಜಧಾನಿ ಹಸಿರೀಕರಣಕ್ಕೆ ಮುಂದಾಗಿರುವ ಬಿಬಿಎಂಪಿ, ಮುಂಗಾರು ಪೂರ್ವ ಮಳೆ ಆರಂಭವಾದ ಬೆನ್ನಲ್ಲೆ ನಾಗರಿಕರಿಗೆ ಆರು ಲಕ್ಷ ಸಸಿಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದೆ.

Advertisement

ನಗರದಲ್ಲಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿ ವೇಳೆ ಅನಿವಾರ್ಯವಾಗಿ ಮರಗಳನ್ನು ಕಡಿಯುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿರುವ ಬಿಬಿಎಂಪಿ, ಸಾರ್ವಜನಿಕರ ಸಹಕಾರ ಪಡೆದು ಸಸಿ ನೆಡುವ ಅಭಿಯಾನಕ್ಕೆ ಮರು ಚಾಲನೆ ನೀಡಲು ತೀರ್ಮಾನಿಸಿದೆ.

ಪಾಲಿಕೆಯ ಅಧಿಕಾರಿಗಳು ಕಳೆದ ವರ್ಷ ನಗರದಲ್ಲಿ 10 ಲಕ್ಷ ಗಿಡಗಳನ್ನು ನೆಡಲು ಗುರಿಯನ್ನು ಹೊಂದಿದ್ದರು. ಆದರೆ, ನಗರದ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಕಳೆದ ಬಾರಿ ವಿತರಣೆಯಾಗದೆ ಉಳಿದಿರುವ 6 ಲಕ್ಷ ಸಸಿಗಳ ಮರು ಹಂಚಿಕೆಗೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಮನೆ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಆಸಕ್ತಿ ಹೊಂದಿರುವ ಹಾಗೂ ತಮ್ಮ ಸ್ವಂತದ ಜಾಗದಲ್ಲಿ ಗಿಡಗಳ ನೆಟ್ಟು ಬೆಳೆಸಬಯಸುವವರು ಪಾಲಿಕೆಯಿಂದ ಉಚಿತವಾಗಿ ಗಿಡಗಳನ್ನು ಪಡೆಯಬಹುದಾಗಿದೆ. ನಾಗರಿಕರ ಮನವಿ ಹಾಗೂ ಅವರು ಗಿಡ ನೆಡಲು ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ಅನುಗುಣವಾಗಿ ಪಾಲಿಕೆಯಿಂದ ಸಸಿಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಚೇತರಿಸಿಕೊಳ್ಳದ “ಗ್ರೀನ್‌’ ಆ್ಯಪ್‌: ನಾಗರಿಕರಿಗೆ ಆನ್‌ಲೈನ್‌ ಮೂಲಕ ಗಿಡಗಳನ್ನು ವಿತರಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಿದ “ಬಿಬಿಎಂಪಿ ಗ್ರೀನ್‌’ ಆ್ಯಪ್‌ ಮತ್ತೆ ಕಾರ್ಯಾರಂಭ ಮಾಡಿಲ್ಲ. ಆ್ಯಪ್‌ಗೆ ಆರಂಭದಲ್ಲಿ ನಾಗರಿಕರಿಂದ ಹೆಚ್ಚಿನ ಮನವಿಗಳು ಬಂದಿದ್ದವು. ಆದರೆ, ಪಾಲಿಕೆಯ ಅಧಿಕಾರಿಗಳು ಸಮರ್ಪಕವಾಗಿ ಗಿಡಗಳನ್ನು ನಾಗರಿಕರಿಗೆ ತಲುಪಿಸುವಲ್ಲಿ ಎಡವಿದ ಪರಿಣಾಮ, ನಂತರದಲ್ಲಿ ನಾಗರಿಕರು ಆ್ಯಪ್‌ ಬಳಸದ ಹಿನ್ನೆಲೆಯಲ್ಲಿ ಆ್ಯಪ್‌ ಸ್ಥಗಿತಗೊಂಡಿತ್ತು.

Advertisement

ಆದರೆ, ಈ ಕುರಿತು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಯರ್‌ ಸಂಪತ್‌ರಾಜ್‌ ಆ್ಯಪ್‌ಗೆ ಮರು ಚಾಲನೆ ನೀಡುವ ಭರವಸೆ ನೀಡಿದ್ದರು. ಆದರೆ, ಮತ್ತೆ ಮಳೆಗಾಲ ಆರಂಭವಾದರೂ ಆ್ಯಪ್‌ಗೆ ಮರುಚಾಲನೆ ಸಿಕ್ಕಿಲ್ಲ. ಹೀಗಾಗಿ ನಾಗರಿಕರಿಗೆ ಆನ್‌ಲೈನ್‌ ಮೂಲಕ ಗಿಡಗಳು ಲಭ್ಯವಾಗುವುದಿಲ್ಲ. 

ಹಂಚುವುದಷ್ಟೇ ನಮ್ಮ ಕೆಲಸ: ಗ್ರೀನ್‌ ಆ್ಯಪ್‌ನಲ್ಲಿ ಬಂದ ಮನವಿಗಳನ್ನು ಆಧರಿಸಿ ನಗರದ 9,670 ಮಂದಿಗೆ 2.68 ಸಸಿಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಪಾಲಿಕೆಯ ಸಿಬ್ಬಂದಿ 1 ಲಕ್ಷದಷ್ಟು ಗಿಡಗಳನ್ನು ನಗರದ ವಿವಿಧ ಭಾಗಗಳಲ್ಲಿ ನೆಟ್ಟಿದ್ದಾರೆ.

ಪಾಲಿಕೆಯ ಅರಣ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣದಿಂದಾಗಿ ಆ್ಯಪ್‌ ಮೂಲಕ ನಾಗರಿಕರಿಗೆ ಸಸಿಗಳನ್ನು ಹಂಚಿಕೆ ಮಾಡಲಾಗಿದ್ದು, ವಿತರಿಸಿರುವ ಗಿಡಗಳ ಪೈಕಿ ಎಷ್ಟು ಉಳಿದಿವೆ ಎಂಬುದನ್ನು ಮೇಲ್ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

ಯಾವೆಲ್ಲ ಸಸಿ ಲಭ್ಯ; ಎಲ್ಲಿ ಪಡೆಯಬೇಕು?: ಮಹಾಗನಿ, ಊರ್ವಶಿ, ತಾಪಸಿ, ರಂಜ, ರೋಸಿಯಾ, ಸಂಪಿಗೆ, ಹೊಂಗೆ, ನೇರಳೆ, ದಾನುಬಿಯಾ, ಔರಾಗ, ಬಾಳೆದಾಸವಾಳ ಸಸಿಗಳು ಲಭ್ಯವಿವೆ. ಪಾಲಿಕೆಯ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಸಸಿಗಳಿಗೆ ಮನವಿ ಸಲ್ಲಿಸಬಹುದಾಗಿದೆ.

ಜತೆಗೆ ಪೂರ್ವ ವಲಯದ ಕೆಂಪಾಪುರ ನರ್ಸರಿ, ಯಲಹಂಕ ವಲಯದ ಅಟ್ಟೂರು, ಬೊಮ್ಮನಹಳ್ಳಿ ವಲಯದ ಕೂಡ್ಲು ನರ್ಸರಿ ಹಾಗೂ ಸುಮ್ಮನಹಳ್ಳಿ, ಜ್ಞಾನಭಾರತಿ, ಹೆಸರುಘಟ್ಟ ನರ್ಸರಿಗಳಿಗೆ ಸಾರ್ವಜನಿಕರು ನೇರವಾಗಿ ಭೇಟಿ ನೀಡಿ ಮನವಿ ಪತ್ರ ಕೊಟ್ಟು ಸಸಿಗಳನ್ನು ಪಡೆಯಬಹುದಾಗಿದೆ.

ಕಳೆದ ಸಾಲಿನಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿ, 4 ಲಕ್ಷ ಸಸಿ ನೆಡಲಾಗಿದೆ. ಉಳಿದ 6 ಲಕ್ಷ ಸಸಿಗಳನ್ನು ಈ ವರ್ಷ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುವುದು. ಆಸಕ್ತ ಜನತೆ, ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳು ಹಾಗೂ ಸ್ವಯಂ ಸೇವಕ ಸಂಸ್ಥೆಗಳು ಗಿಡಗಳನ್ನು ಪಡೆದು ನೆಡುವ ಮೂಲಕ ಪಾಲಿಕೆಗೆ ಸಹಕಾರ ನೀಡಬೇಕು.
-ಚೋಳರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪಾಲಿಕೆ ಅರಣ್ಯ ವಿಭಾಗ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next