ಜೇವರ್ಗಿ: ಕೋವಿಡ್-19ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಡಾ| ಅಜಯಸಿಂಗ್ ಚಾಲನೆ ನೀಡಿದರು.
ತಾಲೂಕಿನಲ್ಲಿ ಒಟ್ಟು 28 ಜನ ಕೋವಿಡ್‌ನಿಂದ ಮೃತಪಟ್ಟ ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸಲಾಯಿತು. ಶನಿವಾರ ಏಳು ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್, ಕೊರೊನಾ ಮಹಾಮಾರಿಯಿಂದ ಜಗತ್ತು ತಲ್ಲಣಗೊಂಡು ಲಕ್ಷಾಂತರ ಜನ ಮೃತಪಟ್ಟಿದ್ದಾರೆ.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೊರೊನಾ ಹಾವಳಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಈಗ ಓಮಿಕ್ರಾನ್ ಭೀತಿಯಿಂದ ಜನ ಹೆದರುವಂತಾಗಿದೆ. ಆದ್ದರಿಂದ ಜನತೆ ನಿರ್ಲಕ್ಷ್ಯ ವಹಿಸದೇ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ತಾಲೂಕಿನಲ್ಲಿ ಒಟ್ಟು 28 ಅರ್ಹ ಫಲಾನುಭವಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ಮಂಜೂರಾಗಿದೆ. 13 ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ, 15 ಎಪಿಎಲ್ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ಧನದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ವಿನಯಕುಮಾರ ಪಾಟೀಲ, ಮುಖಂಡರಾದ ಬೈಲಪ್ಪ ನೆಲೋಗಿ, ಚಂದ್ರಶೇಖರ ಹರನಾಳ, ತಿಪ್ಪಣ್ಣ ಬಳಬಟ್ಟಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.