Advertisement

ಮಾದಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ದಾಖಲೆ ವಿತರಣೆ

02:34 PM Mar 13, 2022 | Team Udayavani |

ರಾಮನಗರ: ಕಂದಾಯ ದಾಖಲೆಗಳನ್ನು ಜಿಲ್ಲೆಯ ರೈತರ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಕೆ. ಚಾಲನೆ ನೀಡಿದರು.

Advertisement

ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮನೆ, ಮನೆಗೆ ತೆರಳಿ ದಾಖಲೆಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು ಪಿ.ಎಂ. ಕಿಸಾನ್‌ ಯೋಜನೆಯಡಿ ನೋಂದಣಿ ಮಾಡಿ ಕೊಂಡಿರುವವರಿಗೆ ಉಚಿತವಾಗಿ ಆರ್‌ಟಿಸಿ, ಅಟ್ಲಾಸ್‌, ಜಾತಿ ಮತ್ತು ಆದಾಯ ಪ್ರಮಾಣಪತ್ರ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪಿ.ಎಂ.ಕಿಸಾನ್‌ ಯೋಜನೆಯಡಿ ನೋಂದಾಯಿಸಿಕೊಳ್ಳದ ಗ್ರಾಮಸ್ಥರು ಮಾ. 21ರಿಂದ 26ರ ವರೆಗೆ ತಮ್ಮ ವ್ಯಾಪ್ತಿಯ ನಾಡ ಕಚೇರಿಗಳಲ್ಲಿ ಉಚಿತವಾಗಿ ದಾಖಲೆ ಗಳನ್ನು ಪಡೆಯಬಹುದು. ಈ ವಿಚಾರದಲ್ಲಿ ಯಾವ ಕುಟುಂಬಕ್ಕೂ ಆತಂಕ ಬೇಡ ಎಂದರು.

ಕಂದಾಯ ದಾಖಲೆ ಮನೆ ಬಾಗಿಲಿಗೆ ಜನಸ್ನೇಹಿ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ ಒಂದು ಬಾರಿಯಾದರೂ ರೈತರು ತಮ್ಮ ದಾಖಲೆ ಪಡೆಯಲು ಸರ್ಕಾರಿ ಕಚೇರಿಗೆತೆರಳುವ ಅವಶ್ಯಕತೆಯಿಲ್ಲ. ಆಡಳಿತ ವರ್ಗವೇ ಅವರ ಮನೆಗೆ ತೆರಳಿ ದಾಖಲೆಗಳನ್ನು ಉಚಿತವಾಗಿ ನೀಡಲಿದೆ. ಇದರಿಂದ ರೈತರು ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು. ಜಿಲ್ಲೆಯಲ್ಲಿರುವ 823 ಕಂದಾಯ ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದರು.

ವಿನೂತನ ಯೋಜನೆ ಜಾರಿಗೆ: ಕಂದಾಯ ಇಲಾಖೆ ಸಾರ್ವಜನಿಕರಿಗೆ 54 ವಿವಿಧ ಸೇವೆಗಳನ್ನು ಒದಗಿಸಿತ್ತದೆ. ಗ್ರಾಮೀಣ ಜನರು ಹಾಗೂ ರೈತರಿಗೆ ಉತ್ತಮ ಹಾಗೂ ಪಾರದರ್ಶಕ ಸೇವೆ ನೀಡಲು ಕಂದಾಯ ಇಲಾಖೆ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡಲು ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಸಾಮಾಜಿಕ ಪಿಂಚಣಿಗಳನ್ನು ಅವರ ಮನೆ ಬಾಗಿಲಿಗೆ ನೀಡಲು ನವೋದಯ ಆ್ಯಪ್‌ ಸೇವೆಗಳು ಜಾರಿಯಲ್ಲಿವೆ ಎಂದರು.

ಈ ಹಿಂದೆ ಆರ್‌.ಟಿ.ಸಿಯನ್ನು ಲಿಖೀತ ರೂಪದಲ್ಲಿ ನೀಡಲಾಗುತ್ತಿತ್ತು. ಇಂದು ಗಣಕೀಕೃತ ರೂಪದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಸೇವೆ ನೀಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದರು.

Advertisement

ಪೋಡಿ ದುರಸ್ತಿ, ಅರಣ್ಯ ಜಮೀನು ಡಿನೋಟಿಫಿಕೇಷನ್‌ ಸೇರಿದಂತೆ ಕೆಲವು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ರಾಮನಗರ ತಹಶೀಲ್ದಾರ್‌ ವಿಜಯ್ ಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್‌, ಉಪಾಧ್ಯಕ್ಷೆ ಶೋಭ, ಸದಸ್ಯ ವೆಂಕಟೇಶ್‌ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next