ದೇವನಹಳ್ಳಿ: ತಾಲೂಕಿನ ಕೊಯಿರಾ ಎಸ್ಸಿ ಕಾಲೋನಿಯಲ್ಲಿ ಪಡಿತರ ಚೀಟಿಯಲ್ಲಿ ವಂಚಿತರಾದವರ ಪಟ್ಟಿಯನ್ನು ನೀಡಿದರೆ ಒಂದು ವಾರದೊಳಗೆ ಪಡಿತರ ಚೀಟಿ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ತಿಳಿಸಿದರು.
ತಾಲೂಕಿನ ಕೊಯಿರಾ ಎಸ್.ಸಿ ಕಾಲೋನಿಯಲ್ಲಿ ಸಮಾಜ ಸೇವಕ ಜುಟ್ಟನಹಳ್ಳಿ ಚೇತನ್ ಗೌಡ ಅವರಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಡು ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಹಿತಿ ನೀಡಿ: ಪಡಿತರ ಚೀಟಿಯಿಂದ ಜಿಲ್ಲೆಯಲ್ಲಿ ಯಾರೂ ಸಹ ವಂಚಿತರಾಗಬಾರದು. ಅಂತಹವರಿಗೆ ಪಡಿತರ ಪಟ್ಟಿಗೆ ಸೇರಿಸಲು ಅವಕಾಶ ನೀಡಲಾಗಿದೆ. ಜಿಲ್ಲೆಯನ್ನು ಕೋವಿಡ್ 19 ಮುಕ್ತ ಜಿಲ್ಲೆ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಇತರೆ ಕಡೆಗಳಿಂದ ಗ್ರಾಮಗಳಿಗೆ ಬಂದ ಕೂಡಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಗಮನಕ್ಕೆ ತರಬೇಕು. ಅವರನ್ನು ತಪಾಸಣೆಗೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ಅನೇಕ ದಾನಿಗಳ ಸಹಕಾರದಿಂದ ಬಡವರಿಗೆ ಆಹಾರ ಧಾನ್ಯದ ಕಿಟ್‌ನ್ನು ನೀಡಲಾಗುತ್ತಿದೆ ಎಂದರು.
ಪಡಿತರ ಪಟ್ಟಿಗೆ ಸೇರಿಸಿ: ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಸಮಾಜ ಸೇವಕ ಜುಟ್ಟನಹಳ್ಳಿ ಚೇತನ್ ಗೌಡ ಅವರಿಂದ 100 ಕಿಟ್‌ಗಳು ಮತ್ತು ನಮ್ಮ ಕಡೆಯಿಂದ 70 ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ಕಾಲೋನಿಗಳಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾಲೋನಿಯಲ್ಲಿ ಅನೇಕ ಜನರಿಗೆ ಪಡಿತರ ಚೀಟಿ ಇರುವುದಿಲ್ಲ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಅಂತಹವರನ್ನು ಪಡಿತರ ಚೀಟಿಗೆ ಸೇರಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ,ಸಮಾಜ ಸೇವಕ ಜುಟ್ಟನಹಳ್ಳಿ ಚೇತನ್ ಗೌಡ, ಮುಖಂಡರಾದ ಜಗದೀಶ್, ನಾರಾಯಣಸ್ವಾಮಿ, ರಾಜು, ಕೃಷ್ಣಪ್ಪ, ಮುನಿರಾಜು ಇದ್ದರು