ವಿಜಯಪುರ: ಗ್ರಾಮೀಣ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು, ಆರ್ಥಿಕ ಸಬಲೀಕರಣ ಮಾಡುವಲ್ಲಿ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಕಾರಿ ಆಗಿದೆ. ಅದರಲ್ಲೂ ಮಹಿಳೆಯರ ಆರ್ಥಿಕ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದೇ ನರೇಗಾ ಯೋಜನೆ ಎಂದು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಹೇಳಿದರು.
ಬಸವನವಾಗೇವಾಡಿ ತಾಲೂಕಿನ ಡೋಣೂರು ಗ್ರಾಮದಲ್ಲಿ ಪಂಚಾಯತ್ ವ್ಯಾಪ್ತಿಯ 6 ಗ್ರಾಮಗಳಲ್ಲಿ ಮಹಿಳಾ ಕಾಯಕ ಶಕ್ತಿ ಅಭಿಯಾನಕ್ಕೆ ವಾದ್ಯಮೇಳದೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವಿಶೇಷ ಅಭಿಯಾನ ಮೂಲಕ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು, ಸ್ವ ಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದಾಗಿದೆ. ಮಹಿಳೆಯರು ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ನರೇಗಾ ಉದ್ಯೋಗ ಚೀಟಿ ಹೊಂದಿದ ಕುಟುಂಬ ಸರಕಾರದ ಪ್ರತಿ ಸೌಲಭ್ಯ ಪಡೆದುಕೊಳ್ಳಬಹುದು. ಬಿಪಿಎಲ್ ಕಾರ್ಡ್ ಮಾದರಿಯಲ್ಲಿ ಪ್ರತಿ ಕುಟುಂಬ ಸದಸ್ಯರು ಗ್ರಾಪಂ ಮೂಲಕ ಉದ್ಯೋಗ ಕಾರ್ಡ್ ಪಡೆದುಕೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ 100 ದಿನದ ಕೂಲಿ ಕೆಲಸ ಮಾಡಿ, 28,500 ರೂ. ವೇತನ ಪಡೆಯಲು ಅವಕಾಶವಿದೆ. ಗ್ರಾಪಂನಲ್ಲಿ ಮಹಿಳೆಯ ಭಾಗವಹಿಸುವಿಕೆ ಕೇವಲ ಶೇ. 34 ರಷ್ಟಿದ್ದು, ಶೇ. 50ಕ್ಕೆ ಹೆಚ್ಚಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಐಇಸಿ ವೃತ್ತಿಪರರಾದ ಸುವರ್ಣಾ ಕಂಬಿ ಮಾತನಾಡಿ, ಮಹಿಳೆಯರು ಪ್ರಸ್ತುತ ಕಲೆ, ಸಾಹಿತ್ಯ, ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲ ರಂಗದಲ್ಲೂ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಿದೆ. ನೀವು ನಿಮ್ಮ ಗ್ರಾಮದ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ಜೊತೆಗೆ ಬೇಸಿಗೆ ದಿನಗಳಲ್ಲಿ ನರೇಗಾ ಕೆಲಸವನ್ನು ಮಾಡಬಹುದು ಎಂದರು.
ಪಿಡಿಒ ಮುತ್ತಣ್ಣ ಇವಣಗಿ, ಕಾರ್ಯದರ್ಶಿ ಸುರೇಶ, ಶ್ರೀಶೈಲ ಉಮನಾಬಾದಿ, ಸಾಧು ಮಹಾರಾಜ, ಮೆಹಬೂಬ್ ಹಿಪ್ಪರಗಿ ಸೇರಿದಂತೆ ಡೋಣೂರು, ಎಂಭತನಾಳ, ನಿಗಿನಾಳ, ಬೊಮ್ಮನಹಳ್ಳಿ, ಮಸಬಿನಾಳ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.