ಚಿಂಚೋಳಿ: ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಕಳೆದ ಆರು ತಿಂಗಳಲ್ಲಿ 4 ಲಕ್ಷ ರೈತರಿಗೆ ಒಟ್ಟು 300 ಕೋಟಿ ರೂ. ಬಡ್ಡಿರಹಿತ ಸಾಲ ವಿತರಣೆ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು. ತಾಲೂಕಿನ ಸುಲೇಪೇಟ ಗ್ರಾಮದಲ್ಲಿ 2021-22ನೇ ಸಾಲಿನ ಸಹಕಾರ ಸಂಘಗಳ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬಡ್ಡಿ ಹಣದಲ್ಲಿ ಜೀತದಾಳಿನಂತೆ ದುಡಿಯಬಾರದು. ಅವರು ಆತ್ಮಹತ್ಯೆಯಂತ ಕಠಿಣ ನಿರ್ಧಾರ ಮಾಡಬಾರದು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು ಒಂದು ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿಯಿದೆ ಎಂದರು.
ಕೆರೋಳಿ ಗ್ರಾಮದಲ್ಲಿ 400 ರೈತರಿಗೆ 2.24 ಕೋಟಿ ರೂ., ಸುಲೇಪೇಟ ಗ್ರಾಮದಲ್ಲಿ ಸಹಕಾರ ಸಂಘಗಳ ಬ್ಯಾಂಕ್ ವತಿಯಿಂದ 1 ಕೋಟಿ ರೂ. ಸಾಲ ವಿತರಿಸಲಾಗುತ್ತದೆ. ಹಿಂದೆ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಬಹಳಷ್ಟು ದಿವಾಳಿಯಾಗಿ ಅಪೆಕ್ಸ್ ಬ್ಯಾಂಕ್‌ಗೆ 200 ಕೋಟಿ ರೂ. ಡಿಪಾಜಿಟ್ ಮಾಡಿ ಬ್ಯಾಂಕ್‌ನ್ನು ಪುನಶ್ಚೇತನ ಮಾಡಲು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಮೇಲೆ ಸಾಕಷ್ಟು ಸರ್ಕಸ್ ಮಾಡಿದ್ದೇನೆ. ಬ್ಯಾಂಕಿನ 102 ಸಿಬ್ಬಂದಿಗಳನ್ನು ರೈತರ ಬಳಿ ಕರೆದೋಯ್ದು ಸಾಲ ವಸೂಲಾತಿ ಮಾಡಿದ್ದರಿಂದ, ಕೇವಲ 50 ದಿನಗಳಲ್ಲಿ 150 ಕೋಟಿ ರೂ. ಸಾಲ ವಸೂಲಾತಿ ಆಗಿದೆ ಎಂದರು. ಪ್ರತಿಯೊಬ್ಬ ರೈತನಿಗೆ 25 ಸಾವಿರ ರೂ.ಗಳಿಂದ 3ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಸುಲೇಪೇಟ ರೈತರಿಗೆ 1.81 ಕೋಟಿ ರೂ. ಸಾಲ ನೀಡಲಾಗುತ್ತಿದೆ. ಹೈನುಗಾರಿಕೆಗೆ 10ಲಕ್ಷ ರೂ. ಸಾಲ ಕೊಡಲಾಗುತ್ತಿದೆ. ಸುಲೇಪೇಟ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಸಹಕಾರಿ ಧುರೀಣ ರಮೇಶ ಯಾಕಾಪುರ ಮಾತನಾಡಿ, ಬೀದರ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ತಾಲೂಕಿನಲ್ಲಿ ಐನಾಪುರ 12 ಕೋಟಿ ರೂ. ಹಣಕಾಸು ವ್ಯವಹಾರ ನಡೆಸುತ್ತಿದೆ. ಸುಲೇಪೇಟ ಸಹಕಾರ ಸಂಘದಿಂದ ಒಟ್ಟು 400 ರೈತರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ ಮಾತನಾಡಿ, ಕಲಬುರಗಿ-ಯಾದಗಿರಿ ಸಹಕಾರಿ ಕೇಂದ್ರ ಬ್ಯಾಂಕ್ ಶೋಚನೀಯ ಸ್ಥಿತಿಯಲ್ಲಿತ್ತು. ಅಪೆಕ್ಸ್ ಬ್ಯಾಂಕಿನ ಸಾಲ ಮರು ಪಾವತಿಸಲಾಗಿದೆ. ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ನೀಡಲಾಗುತ್ತಿದೆ ಎಂದರು. ದಯಾನಂದ ಸುಲೇಪೇಟ ಸಾಲ ನೀಡುವ ಕುರಿತು ಮಾಹಿತಿ ನೀಡಿದರು.
ಬ್ಯಾಂಕ್ ಅಧ್ಯಕ್ಷ ಪ್ರಭು ನಾಗೂರೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ರಮೇಶ ಯಾಕಾಪುರ, ಶಿವಲಿಂಗಯ್ಯ, ಆತೀಶ ಪವಾರ, ಚಂದ್ರಶೇಖರ ಗುತ್ತೇದಾರ, ನರಸಪ್ಪ ಪೂಜಾರಿ, ನಾರಾಯಣ, ಲಕ್ಷ್ಮಣ ಆವಂಟಿ, ಮಹೇಶ ಬೆಮಳಗಿ, ನಾಗರಾಜ ಬಸೂದೆ, ಅಬ್ದುಲ್ ಸಲೀಮ್, ಬಸವರಾಜ ಸೊಂತ, ಶರಣಪ್ಪ ಹೂಗಾರ, ಸಂಗಪ್ಪ ಸಾಲಿಮಠ, ಸೌಭಾಗ್ಯವತಿ, ನೀಲಮ್ಮ ಮೇದರ, ರುದ್ರಪ್ಪ, ಗೌಸಮಿಯ್ಯ, ಶರಣು ಮೆಡಿಕಲ್, ವಿಷ್ಣುರಾವ್ ಬಸೂದೆ, ಮಾಣಿಕರಾವ್ ಗುಲಗುಂಜಿ, ಮಲ್ಲಿಕಾರ್ಜುನ ರುದನೂರ, ಬಂಡಪ್ಪ ಅಣಕಲ್ ಇನ್ನಿತರರಿದ್ದರು. ಮುಖ್ಯನಿರ್ವಹಣಾ ಅಧಿಕಾರಿ ವಿಜಯಕುಮಾರ ಶಾಬಾದಿ ಸ್ವಾಗತಿಸಿದರು, ಶಿವಶರಣ ಕುಂಬಾರ ನಿರೂಪಿಸಿದರು, ಮಹೇಶ ಬೆಳಮಗಿ ವಂದಿಸಿದರು.