ಚಳ್ಳಕೆರೆ: ಸರ್ಕಾರ ಕಟ್ಟಡ ಕಾರ್ಮಿಕರಿಗೋಸ್ಕರ ಆಹಾರ ಕಿಟ್‌ನ್ನು ನೀಡುವ ಮೂಲಕ ಈ ವರ್ಗದ ನೆರವಿಗೆ ಧಾವಿಸಿದ್ದು, ನೋಂದಣಿಗೊಂಡ ಕಟ್ಟಡ ಕಾರ್ಮಿಕರು ಆಹಾರ ಕಿಟ್‌ನ್ನು ಪಡೆದುಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ನಗರದ ಎಐಟಿಯುಸಿ ಸಂಘಟನೆಯ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಈಗಾಗಲೇ ಹಲವಾರು ಕಾರ್ಮಿಕ ಸಂಘಟನೆಗಳು ನೋಂದಣಿ ಮಾಡಿಸಿದ್ದರೂ ಕೆಲವು ಹೆಸರುಗಳು ಪಟ್ಟಿಯಿಂದ ಕೈ ತಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಸೇವೆಸಲ್ಲಿಸಿ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದಲ್ಲಿ ಅಂತಹವರು ಕಾರ್ಮಿಕ ಇಲಾಖೆಗೆ ಹೋಗಿ ನೋಂದಣಿ ಮಾಡಿಸಿಕೊಂಡು ಈ ಸೌಲಭ್ಯ ಪಡೆಯಬೇಕು. ಸರ್ಕಾರ ಕಟ್ಟಡಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯನೀಡುವ ಯೋಜನೆ ರೂಪಿಸಬೇಕು ಎಂದರು.
ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಕಳೆದ ಸುಮಾರು40 ವರ್ಷಗಳಿಂದ ಎಐಟಿಯುಸಿ ನೇತೃತ್ವದ ಕಾರ್ಮಿಕ ಸಂಘಟನೆಗಳು ತಮ್ಮದೇಯಾದ ತತ್ವ ಸಿದ್ಧಾಂತಗಳ ಅಡಿಯಲ್ಲಿಕಾರ್ಯನಿರ್ವಹಿಸುತ್ತಿವೆ. ತಾಲೂಕಿನಾದ್ಯಂತ ಒಟ್ಟು 4250 ಕಾರ್ಮಿಕರಿಗೆ ಗುರುತಿನ ಚೀಟಿನೀಡಲಾಗಿದೆ. ಪ್ರಸ್ತುತ 2250 ಕಾರ್ಮಿಕರಿಗೆ ಮಾತ್ರ ಆಹಾರ ಕಿಟ್ ಲಭ್ಯವಿದ್ದು, ಉಳಿದಎಲ್ಲರಿಗೂ ಆಹಾರ ಕಿಟ್ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಳೆದ ಎರಡು ವರ್ಷದಿಂದ ಕೆಲಸವಿಲ್ಲದ ಎಲ್ಲಾ ಕುಟುಂಬಗಳು ಆರ್ಥಿಕ ಮುಗಟ್ಟನ್ನುಎದುರಿಸುತ್ತಿವೆ. ಆದರೆ, ಸರ್ಕಾರ ಕೇವಲ ಆಹಾರ ಕಿಟ್ ನೀಡಿ ಸಂತೈಸುವ ವೃತ್ತಿಒಳ್ಳೆಯಲ್ಲದ್ದಲ್ಲ. ಬದಲಾಗಿ ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ನೆರವು ನೀಡಬೇಕು. ಶಾಸಕರು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಾರ್ಮಿಕರಪರವಾಗಿ ಚರ್ಚಿಸಬೇಕು ಎಂದು ಮನವಿ ಮಾಡಿದರು.
ಎಐಟಿಯುಸಿ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ತಿಪ್ಪೇರುದ್ರಪ್ಪ, ಕಾರ್ಯದರ್ಶಿ ಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ದೊಡ್ಡರಂಗಪ್ಪ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.