ಮೈಸೂರು: ಯಾಂತ್ರಿಕ ಯುಗದಲ್ಲಿ ಕೈಯಿಂದ ಮೂರ್ತಿ ತಯಾರಿಸುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರ ಈ ಕಲಾವಿದರನ್ನು ಪ್ರೋತ್ಸಾಹಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು. ಅರಿವು ಸಂಸ್ಥೆ ವತಿಯಿಂದ ನಗರದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ 150 ಪರಿಸರ ಸ್ನೇಹಿ ಗಣೇಶ ಮೂರ್ತಿ, ಮಣ್ಣಿನ ಗೌರಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕೈಯಿಂದ ವಿವಿಧ ರೀತಿಯಲ್ಲಿ ವಿಶೇಷ ಮೂರ್ತಿ ತಯಾರಿಸುತ್ತಿದ್ದರು. ಆದರೆ, ಇಂದು ಬಹುತೇಕ ಅಚ್ಚು ಬಳಸುವವರೇ ಹೆಚ್ಚು. ಇದು ನಿಜವಾದ ಕಲಾವಿದರ ಶ್ರಮಕ್ಕೆ ಹೊಡೆತ ಬೀಳಲಿದೆ. ಹಾಗಾಗಿ, ಆ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಮಿಕಲ್ ಮಿಶ್ರಿತ ಪಿಒಪಿ ಗಣಪತಿ ವಿಗ್ರಹ ತಯಾರಿಸಿ ಮಾರಾಟ ಮಾಡದಂತೆ ತಿಳಿಸಿದ್ದರೂ, ಕೆಲವು ಭಾಗದಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಇಂತಹ ಮೂರ್ತಿ ಮಾರಾಟಕ್ಕೆ ಅವಕಾಶ ನೀಡದಂತೆ ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ದಂಡ ವಿಧಿಸಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ಬಣ್ಣ ರಹಿತ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕಿದೆ ಎಂದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಪಿಒಪಿ ನೀರಿನಲ್ಲಿ ಕರಗುವುದಿಲ್ಲ,
ಹೀಗಾಗಿ ಮಣ್ಣಿನ ಮೂರ್ತಿಗಳನ್ನು ಕಲಾವಿದರು ತಯಾರಿಸಬೇಕು ಮತ್ತು ಸಾರ್ವಜನಿಕರೂ ಪರಿಸರ ಮೂರ್ತಿಗಳನ್ನೇ ಖರೀದಿಸಬೇಕೆಂದರು. ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಇದ್ದರು.