Advertisement

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಮುಂದಾಗಿ

02:50 PM May 06, 2022 | Team Udayavani |

ಗದಗ: ಕೊಳಚೆ ಪ್ರದೇಶಗಳ ಘೋಷಣೆ ಮಾಡಿ, ಆ ಪ್ರದೇಶಗಳನ್ನು ಮಂಡಳಿಗೆ ಹಸ್ತಾಂತರಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ವಿವಿಧ ಬಡಾವಣೆಗಳ ಅಭಿವೃದ್ಧಿ ಹಾಗೂ ಸ್ಲಂ ನಿವಾಸಿಗಳ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಲಂ ನಿವಾಸಿಗಳ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ನಗರಸಭೆಯ ಶೇ.24.10 ಅನುದಾನದಲ್ಲಿ ಮೀಸಲಿರಿಸಿದ್ದು, ಅಮೃತ ನಗರೋತ್ಥಾನ ಹಂತ-4ರಲ್ಲೂ ಅನುದಾನ ಮೀಸಲಿರಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಕೊಳಚೆ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಭಿವೃದ್ಧಿಪಡಿಸಬೇಕು. ಸ್ಲಂ ನಿವಾಸಿಗಳು ನಿವೇಶನ ಹೊಂದಿದ್ದಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅವರಿಗೆ ಮನೆ ಮಂಜೂರಾತಿ ನೀಡಬೇಕು. ಸ್ಲಂಗಳಲ್ಲಿ ವಾಸಿಸುವ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಲೇಬರ್‌ ಕಾರ್ಡ್‌ ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವ ಕಾರ್ಯವನ್ನು ಸಂಬಂಧಿತ ಇಲಾಖೆಗಳು ನಿರ್ವಹಿಸಬೇಕು. ಅಲ್ಲದೇ, ಸ್ಲಂ ವಾಸಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕಿಸಲು ಇಲಾಖಾ ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿದ ಬಡಾವಣೆಗಳ ನಿವೇಶನಗಳಿಗೆ ನಗರಸಭೆಯಿಂದ ನಮೂನೆ-3 ನ್ನು ವಿತರಿಸಲು ಕ್ರಮ ವಹಿಸಬೇಕು. ಸಂಬಂಧಿಸಿದ ಇಲಾಖೆಗಳ ಸಮನ್ವಯಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮಾಡಿ ಸಂಪೂರ್ಣತಾ ಪ್ರಮಾಣ ಪತ್ರಗಳನ್ನು ನೀಡಿ, ನಗರಸಭೆಯಿಂದ ನಮೂನೆ-3ರನ್ನು ವಿತರಿಸಲು ಸರ್ಕಾರದ ಅ ಸೂಚನೆ ಹಾಗೂ ಸುತ್ತೋಲೆಗಳ ನಿರ್ದೇಶನದನ್ವಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

Advertisement

ಸಾರ್ವಜನಿಕರಿಗೆ ನಿಯಮಾನುಸಾರ ನಮೂನೆ-3 ವಿತರಣೆಗೆ ಸಂಬಂ ಸಿದಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ, ಹೆಸ್ಕಾಂ, ಜಿಲ್ಲಾ ನೋಂದಣಾಧಿಕಾರಿಗಳು ಈ ಎಲ್ಲಾ ಸದಸ್ಯರು ಒಳಗೊಂಡು ರಚಿಸಲಾದ ಸಮಿತಿಯಲ್ಲಿ ವಿವಿಧ ಪ್ರಾಧಿಕಾರಗಳಲ್ಲಿ ಸ್ವೀಕೃತವಾಗಿರುವ ಮನವಿ ಹಾಗೂ ಅರ್ಜಿಗಳನ್ನು ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ಪ್ರಕಾರ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ನಿಯಮಾನುಸಾರ ನಮೂನೆ-3 ಹಾಗೂ ಬಡಾವಣೆಗಳ ಅಭಿವೃದ್ಧಿಗಾಗಿ ಕ್ರಮ ವಹಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್‌.ಎನ್‌.ಗುರುಪ್ರಸಾದ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ನರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಜಬ್ಟಾರ ಅಹ್ಮದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜೆ.ಯು.ಪೂಜಾರ, ವಿವಿಧ ಇಲಾಖೆ, ನಿಗಮಗಳ ಅಧಿಕಾರಿಗಳು, ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಮ್ತಿಯಾಜ್‌ ಮಾನ್ವಿ, ಪ್ರತಿನಿಧಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next