ಮುಧೋಳ: ಸಿಡಿಪಿಒ ಕಚೇರಿ ಮೂಲಕ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಅನುಮತಿ ಪಡೆದು ನೇಮಕಾತಿ ಆದೇಶ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುರೇಶರಡ್ಡಿ ತಿಳಿಸಿದರು.
ನಗರದ ಸಿಡಿಪಿಒ ಕಚೇರಿಯಲ್ಲಿ ಎಸಿಬಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ 13 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 13 ಸಹಾಯಕಿಯರ ನೇಮಕದ ಆದೇಶ ವಿತರಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳದಿಂದ ಸಾಕಷ್ಟು ದಾಖಲಾತಿ ಪರಿಶೀಲಿಸಿ ಶೋಧಿಸಿದಾಗ ಸಿಡಿಪಿಒ ಕಚೇರಿಯಲ್ಲಿ 30 ಜನ ಅಭ್ಯರ್ಥಿಗಳಿಗೆ ನೇಮಕ ಆದೇಶಗಳು ಉಳಿದುಕೊಂಡಿದ್ದವು. ಸಾಕಷ್ಟು ಜನ ಮೌಖೀಕವಾಗಿ ಮಾಹಿತಿ ನೀಡಿದ್ದನ್ನು ಆಧರಿಸಿ ತನಿಖೆ ಮಾಡಿದ್ದೇವೆ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಪ್ರಭಾರಿ ಉಪ ನಿರ್ದೇಶಕಿ ಅನ್ನಪೂರ್ಣಾ ಕುಬಕಡ್ಡಿ ಮಾತನಾಡಿ, ನಮ್ಮ ಇಲಾಖೆ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ನೇಮಕಾತಿ ಆಗಿರುವ ಅಭ್ಯರ್ಥಿಗಳು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಬೇಕು ಎಂದರು. ಎಸಿಬಿ ಸಿಪಿಐ ಸಮೀರ್ ಮುಲ್ಲಾ ಮಾತನಾಡಿ, ನೇಮಕ ಆದೇಶ ಇಟ್ಟುಕೊಂಡು ಅಭ್ಯರ್ಥಿಗಳನ್ನು ಕಾಯಿಸಿದ್ದಾರೆ. ಇದು ಲೋಪವಾಗುತ್ತದೆ. ಭ್ರಷ್ಟಾಚಾರದ ದೂರುಗಳು ಮೌಖೀಕವಾಗಿ ಬಂದಿವೆ. ಯಾರಾದರೂ ಲಿಖೀತ ದೂರು ನೀಡಿದ್ದರೆ ತಕ್ಷಣ ಅವರನ್ನು ವಶಕ್ಕೆ ಪಡೆಯಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಕೆಲಸ ನಿಭಾಯಿಸಿಕೊಂಡು ಹೋಗಬೇಕು ಎಂದರು.
ಈ ವೇಳೆ ಎಸಿಬಿ ಸಿಪಿಐ ವಿಜಯ ಮಠಪತಿ, ಸಿಬ್ಬಂದಿಗಳಾದ ಎಚ್.ಎಸ್. ಹೂಗಾರ, ಜಿ.ಜಿ. ಕಾಖಂಡಕಿ, ಎಸ್.ಆರ್. ಚುರಚ್ಯಾಳ, ಸಿ.ಎಸ್. ಅಚನೂರ, ಬಿ.ವಿ.ಪಾಟೀಲ, ಎಸ್.ಎನ್. ರಾಠೊಡ, ಸಿದ್ದು ಸುನಗದ, ಎನ್.ಎ.ಪತ್ತಾರ, ಸಿಡಿಪಿಒ ಸಾವಿತ್ರಿ ಗುಗ್ಗರಿ ಇದ್ದರು.
ಮೊಟ್ಟ ಮೊದಲ ಪ್ರಯತ್ನಕ್ಕೆ ಮೆಚ್ಚುಗೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಪ್ರಕ್ರಿಯೆಯಲ್ಲಿ ಆಗುತ್ತಿರುವ ಪ್ರಮಾದಗಳ ಮಧ್ಯೆಯೂ ಪ್ರಸಕ್ತ ವರ್ಷದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳು ಮೌಖೀಕ ದೂರು ಆಧರಿಸಿ ಖಚಿತ ಮಾಹಿತಿ ತಿಳಿಯಲು ಎಸಿಬಿ ಎಸ್ಪಿ ನೇಮಗೌಡರ ಸೂಚನೆ ಮೇರೆಗೆ ಡಿವೈಎಸ್ಪಿ ಸುರೇಶ ರಡ್ಡಿ ನೇತೃತ್ವದಲ್ಲಿ ಸಿಡಿಪಿಒ ಕಚೇರಿ ಮೇಲೆ ದಾಳಿ ಮಾಡಿದಾಗ ಶೋಧನೆ ಹಂತದಲ್ಲಿ ನೇಮಕ ಆದೇಶ ಸಿಕ್ಕ ಬಳಿಕ ವಿವರವಾದ ಮಾಹಿತಿ ಪಡೆದುಕೊಂಡಿದ್ದರು. ನೇಮಕವಾಗಬೇಕಿದ್ದ ಫಲಾನುಭವಿಗಳನ್ನು ದೂರವಾಣಿ ಕರೆ ಮಾಡಿ ಕರೆಸಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳು ಹಾಗೂ ಎಸಿಬಿ ನೇತೃತ್ವದಲ್ಲಿ ವಿತರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬುಧವಾರ ನಡೆದ ನೇಮಕ ಆದೇಶ ಸಭೆಯಲ್ಲಿ ಸಾರ್ವಜನಿಕರು, ಅಧಿಕಾರಿಗಳು, ಎಸಿಬಿ ಅಧಿಕಾರಿಗಳು ಸಾಥ್ ನೀಡಿದರು.