Advertisement

ಮಂಗಳೂರು ವ್ಯಾಪ್ತಿ:ಅರಣ್ಯ ಇಲಾಖೆಯಿಂದ 75 ಸಾವಿರ ಗಿಡ ಹಂಚಿಕೆ

11:40 AM Apr 24, 2022 | Team Udayavani |

ಮಹಾನಗರ: ಪರಿಸರ ಸಂರಕ್ಷಣೆ ಉದ್ದೇಶದಿಂದ ಅರಣ್ಯ ಇಲಾಖೆಯು ಪ್ರತೀ ವರ್ಷದಂತೆ ಈ ವರ್ಷ ಸಾರ್ವಜನಿಕರಿಗೆ ಗಿಡ ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಂತೆ ಮಂಗಳೂರು ನಗರ ಮತ್ತು ತಾಲೂಕು ವ್ಯಾಪ್ತಿ ಸುಮಾರು 75,000 ಗಿಡಗಳನ್ನು ಹಂಚಲು ನಿರ್ಧರಿಸಲಾಗಿದೆ.

Advertisement

ಮಳೆಗಾಲದ ಆರಂಭದಲ್ಲಿ ಜೂನ್‌ ತಿಂಗಳಲ್ಲಿ ಗಿಡ ವಿತರಿಸಲು ನಿರ್ಧರಿಸಲಾಗಿದ್ದು, ಅದರಂತೆ ಪಾಲಿಕೆ ವ್ಯಾಪ್ತಿ ಮತ್ತು ಮಂಗಳೂರು ತಾಲೂಕು ವ್ಯಾಪ್ತಿ ರೈತರಿಗೆ ಅವರ ಜಾಗದ ಆರ್‌ಟಿಸಿ ದಾಖಲೆ ಆಧಾರದಲ್ಲಿ ಗಿಡ ನೀಡಲು ತೀರ್ಮಾನಿಸಲಾಗಿದೆ. ಒಂದು ಎಕರೆ ಜಾಗಕ್ಕೆ ಸುಮಾರು 50 ಗಿಡಗಳನ್ನು ನೀಡಲಾಗುತ್ತಿದೆ. 2022ನೇ ಸಾಲಿನಲ್ಲಿ ರೈತರಿಗೆ ಗಿಡ ವಿತರಿಸಲು ರಾಜ್ಯ ಸರಕಾರ ಟಾರ್ಗೆಟ್‌ ನೀಡಿತ್ತು. ಅದರಂತೆ ಕಳೆದ ವರ್ಷ ಅರಣ್ಯ ಇಲಾಖೆ ಗಿಡಗಳ ನಾಟಿ ಮಾಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿಯ ಪ್ರಕಾರ ಈ ಬಾರಿ ಪುನರ್ಪುಳಿ, ಮಾವು, ಹಲಸು, ಹೆಬ್ಬಲಸು, ರಕ್ತಚಂದನ, ಹೊಂಗೆ, ಹೊನ್ನೆ, ನೇರಳೆ ಸಹಿತ ವಿವಿಧ ಗಿಡಗಳನ್ನು ಹಂಚಲು ನಿರ್ಧರಿಸಲಾಗಿದೆ.

ಗುರಿ ನೀಡದ ಸರಕಾರ

ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡಲು ರಾಜ್ಯ ಸರಕಾರವು ಅರಣ್ಯ ಇಲಾಖೆಗೆ ಪ್ರತೀ ವರ್ಷ ನಿಗದಿತ ಗುರಿ ನೀಡುತ್ತದೆ. ಅದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಗಿಡ ಬೆಳೆಸಲಾಗುತ್ತದೆ. ನಿರ್ವಹಣೆಗೆಂದು ಹಂತ ಹಂತ ವಾಗಿ ಅನುದಾನ ಕೂಡ ಬಿಡುಗಡೆ ಮಾಡುತ್ತದೆ. ಆದರೆ ಕೊರೊನಾ ಪರಿಣಾಮ ಎರಡು ವರ್ಷ ಜಿಲ್ಲೆಗೆ ಯಾವುದೇ ಗುರಿ ನಿಗದಿಪಡಿಸಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲು ಸಾಧ್ಯವಾಗಿಲ್ಲ. ದ.ಕ. ಜಿಲ್ಲೆಯ ತೆರೆದ ಪ್ರದೇಶಗಳು, ಸರಕಾರಿ ಜಾಗಗಳು, ರಸ್ತೆ ಬದಿ, ಡಿವೈಡರ್‌ ಮಧ್ಯದಲ್ಲಿ ಮಳೆಗಾಲದಲ್ಲಿ ಅರಣ್ಯ ಇಲಾಖೆಯು ಗಿಡ ನಾಟಿ ಮಾಡುತ್ತದೆ. ಸಾಮಾನ್ಯವಾಗಿ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಈ ಪ್ರಕ್ರಿಯೆಗಳು ನಡೆಯುತ್ತದೆ.

ಗಿಡ ವಿತರಣೆಗೆ ಸಿದ್ಧತೆ

Advertisement

ಮಂಗಳೂರು ನಗರ ಮತ್ತು ತಾಲೂಕು ವ್ಯಾಪ್ತಿ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಿಡ ವಿತರಣೆಗೆ ರಾಜ್ಯ ಸರಕಾರ ಕಳೆದ ವರ್ಷ 75,000 ಗಿಡಗಳ ಟಾರ್ಗೆಟ್‌ ನೀಡಿತ್ತು. ಅದರಂತೆ ನಾಟಿ ಮಾಡಲಾಗಿದ್ದು, ಮುಂದಿನ ವರ್ಷದ ಟಾರ್ಗೆಟ್‌ ಜೂನ್‌ ತಿಂಗಳಲ್ಲಿ ಅರಣ್ಯ ಇಲಾಖೆ ಕೈಸೇರಲಿದೆ. ಪ್ರಶಾಂತ್‌ ಪೈ, ಮಂಗಳೂರು ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next