ಬಾಗಲಕೋಟೆ: ಶುಚಿ ಯೋಜನೆಯಡಿ ಮಹಿಳೆಯರಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ನೀಡುವ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ನಿಗದಿತ ಅವಧಿಯೊಳಗೆ ವಿತರಣೆಯಾಗದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಭವನದಲ್ಲಿ ಸೋಮವಾರ ಶುಚಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಬಂದಂತಹ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವಿತರಣೆಗೆ ವಿವಿಧ ಇಲಾಖೆಗೆ ಸರಬರಾಜು ಆಗಬೇಕು. ವಿತರಿಸಿದ ಬಗ್ಗೆ ದಾಖಲೆ ಇಡಬೇಕು. ಸರಬರಾಜು ಆದ ವಾರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ವಿತರಣೆಯಾದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮಿತಿಗೆ, ತಾಲೂಕಾ ಹಂತದಲ್ಲಿ ತಾಲೂಕು ಸಮಿತಿಯ ಗಮನಕ್ಕೆ ತರಲು ತಿಳಿಸಿದರು.
ಇತ್ತೀಚೆಗೆ ಬಾಗಲಕೋಟೆಯ 50 ಹಾಸಿಗೆಯ ಆಸ್ಪತ್ರೆಯಲ್ಲಿರುವ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಪಕಿನ್ ವಿತರಣೆ ಮಾಡದಿರುವುದು ಕಂಡುಬಂದಿತು. ಜನವರಿ ಮಾಹೆಯಲ್ಲಿಯೇ 4ಲಕ್ಷ ನ್ಯಾಪಕಿನ್‌ಗಳು ಇದ್ದರೂ ವಿತರಿಸದೇ ಆರೋಗ್ಯ ಇಲಾಖೆಯ ಕಚೇರಿಯ ನೆಲದ ಮೇಲೆ ಇಟ್ಟಿರುವುದನ್ನು ಹಾಗೂ ಕಳೆದ 2019-20ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್ ವಿತರಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ಕರೆದಿರುವುದಾಗಿ ತಿಳಿಸಿದರು.
ಹದಿಹರೆಯದ ಹೆಣ್ಣು ಮಕ್ಕಳು ಋತುಕಾಲದ ಸಮಯದಲ್ಲಿ ಶುಚಿತ್ವವಿಲ್ಲದ ಅಭ್ಯಾಸಗಳಿಂದ ಉಂಟಾಗಬಹುದಾದ ಸೋಂಕುಗಳಿಂದ ಶಾಲೆಗೆ ಗೈರು ಹಾಜರಾಗುವುದು ಹಾಗೂ ತಮ್ಮ ದೈನಂದಿನ ಆರ್ಥಿಕ, ಕೌಟುಂಬಿಕ ಚಟುವಟಿಕೆಗಳಿಂದ ದೂರ ಉಳಿಯುವ ಕಾರಣಕ್ಕಾಗಿ ಸ್ಯಾನಿಟರಿ ನ್ಯಾಪಕಿನ್‌ಗಳ ಬಳಕೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಶುಚಿ ಯೋಜನೆ ರೂಪಿಸಿದ್ದು, ಇದನ್ನು ಸರಿಯಾಗಿ ಅನುಷ್ಠಾನಗೊಳಿಸದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಬಂದ ದಾಸ್ತಾನುಗಳನ್ನು ಇಲಾಖಾವಾರು ಸರಬರಾಜು ಮಾಡಬೇಕು. ಸರಬರಾಜು ಆದ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಶುಚಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ತೋರಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ|ಬಿ.ಜಿ ಹುಬ್ಬಳ್ಳಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈಗ ದಾಸ್ತಾನುಗಳು ಸರಬರಾಜು ಆಗಿ ನ್ಯಾಪಕಿನ್ ವಿತರಣೆಗೊಳ್ಳುತ್ತಿವೆ. ಉಳಿದ ತಾಲೂಕಾವಾರು ವಿತರಣೆಗೆ ಬಾಕಿ ಇದ್ದರೆ ತಕ್ಷಣ ವಿತರಣೆ ಮಾಡಲು ಸೂಚಿಸಿದರು. ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ದಾಸ್ತಾನು ಇರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ವಿತರಣೆಗೆ ಕ್ರಮ ಕೈಗೊಳ್ಳಲು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ದಾಸ್ತಾನು ವಿತರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡಂಬರ, ಅಲ್ಪಸಂಖ್ಯಾತರ ಇಲಾಖೆಯ ಉಪ ನಿರ್ದೇಶಕ ಮೇಲಿನಮನಿ ಉಪಸ್ಥಿತರಿದ್ದರು.