ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು 2,31,053 ಹೆಕ್ಟೇರ್ ಭೂಮಿ ಬಿತ್ತನೆ ಗುರಿ ಹೊಂದಲಾಗಿದ್ದು, ಅಗತ್ಯ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ದಾಸ್ತಾನು ಹೊಂದಲಾಗಿದೆ ಎಂದು ಉಪವಿಭಾಗಾಧಿಕಾರಿ ಜಯಮಾಧವ ಪಿ. ಹೇಳಿದರು.
ನಗರದ ಎಸಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರಸಗೊಬ್ಬರ ಮಾರಾಟ ಕಂಪೆನಿಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ವಿವಿಧ ಬೆಳೆಗಳ ಅಂದಾಜು 54,383 ಕ್ವಿಂಟಾಲ್ ಬೀಜ ಅಗತ್ಯವಿದ್ದು, ಈಗಾಗಲೇ 32,000 ಕ್ವಿಂಟಾಲ್ ಬೀಜ ದಾಸ್ತಾನು ಹೊಂದಲಾಗಿದೆ. 17409 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಹೊಂದಲಾಗಿದ್ದು. ಎಪ್ರಿಲ್-ಮೇ ತಿಂಗಳ ಅಂತ್ಯದವರೆಗೆ ರೈತರಿಂದ 10,513 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಬಂದಿದೆ ಎಂದರು.
ರಸಗೊಬ್ಬರ ಮಾರಾಟದ ಪರವಾನಗಿ ಹೊಂದಿರುವ ಕೇಂದ್ರದವರು ಕಡ್ಡಾಯವಾಗಿ ಪಿಒಎಸ್ ಯಂತ್ರ ಬಳಸುವ ಮೂಲಕ ರೈತರಿಗೆ ರಸಗೊಬ್ಬರ ವಿತರಿಸಬೇಕು. ಅಂದಾಗ ಮಾತ್ರ ರಿಯಾಯತಿ ದರ ಯೋಜನೆ ಅನ್ವಯವಾಗುತ್ತದೆ. ಜಿಲ್ಲೆಯಲ್ಲಿ ಐದು ತಾಲೂಕುಗಳ ಸಹಕಾರಿ ಸಂಘ ಹಾಗೂ ಖಾಸಗಿ ಮಾರಾಟಗಾರರ ಕೇಂದ್ರಗಳಿಗೆ 169 ಪಿಒಎಸ್ ಯಂತ್ರ ವಿತರಿಸಲಾಗಿದೆ. ಇವುಗಳನ್ನು ಕಡ್ಡಾಯವಾಗಿ ಬಳಸಬೇಕು. ಸಹಾಯಕ ಕೃಷಿ ನಿರ್ದೇಶಕರು ಮಾರಾಟ ಕೇಂದ್ರಗಳಿಗೆ ಸ್ವತಃ ಭೇಟಿ ನೀಡಿ ಪಿಒಎಸ್ ಯಂತ್ರಗಳ ಬಳಕೆ ಬಗ್ಗೆ ತರಬೇತಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
2018ರ ಮುಂಗಾರಿಗೆ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗಾಗಿ 28 ಕೇಂದ್ರ ಆರಂಭಿಸಲಾಗಿದೆ. ಧಾರವಾಡ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಧಾರವಾಡ, ಗರಗ, ಅಮ್ಮಿನಭಾವಿ, ಅಳ್ನಾವರ, ನಿಗದಿ(ಹೆಚ್ಚುವರಿ), ಹೆಬ್ಬಳ್ಳಿ (ಹೆಚ್ಚುವರಿ), ಉಪ್ಪಿನ ಬೆಟಗೇರಿ(ಹೆಚ್ಚುವರಿ), ನರೇಂದ್ರ (ಹೆಚ್ಚುವರಿ) ಹಾಗೂ ಮನಗುಂಡಿ (ಸೊಸೈಟಿ), ಹುಬ್ಬಳ್ಳಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಹುಬ್ಬಳ್ಳಿ, ಶಿರಗುಪ್ಪಿ, ಛಬ್ಬಿ, ಹಳೇಹುಬ್ಬಳ್ಳಿ, ಬಿಡ್ನಾಳ, ಕುಸುಗಲ್‌ನಲ್ಲಿ ಕೇಂದ್ರ ತೆರೆಯಲಾಗಿದೆ ಎಂದರು.
ಕಲಘಟಗಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕಲಘಟಗಿ, ತಬಕದಹೊನ್ನಳ್ಳಿ, ಧುಮ್ಮವಾಡ, ತಾವರಗೆರೆ(ಹೆಚ್ಚುವರಿ), ಮಿಶ್ರಿಕೋಟಿ (ಹೆಚ್ಚುವರಿ), ಗಂಜಿಗಟ್ಟಿ(ಹೆಚ್ಚುವರಿ), ಬೇಗೂರು (ಹೆಚ್ಚುವರಿ) ಮತ್ತು ಕುಂದಗೋಳ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕುಂದಗೋಳ, ಸಂಶಿ, ಯರಗುಪ್ಪಿ(ಸೊಸೈಟಿ), ಯಲಿವಾಳ( ಹೆಚ್ಚುವರಿ), ಗುಡಗೇರಿ( ಸೊಸೈಟಿ) ಮತ್ತು ನವಲಗುಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಅಣ್ಣೀಗೇರಿ, ಮೊರಬ, ನವಲಗುಂದ(ಹೆಚ್ಚುವರಿ) ಮತ್ತು ಶಲವಡಿ (ಹೆಚ್ಚುವರಿ) ಕೇಂದ್ರಗಳಲ್ಲಿ ವಿವಿಧ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಜಿ. ಮೇತ್ರಿ, ಕಿವಡಿ ಪ್ರದೀಪ, ಸೋಮಲಿಂಗಪ್ಪ, ಮೈತ್ರಿ, ಆರ್.ಎ. ಅನಗೌಡರ ಮತ್ತು ಜಂಟಿ ನಿರ್ದೇಶಕ ಕಚೇರಿಯ ತಾಂತ್ರಿಕ ಅಧಿಕಾರಿ ಎಂ.ಎಂ. ನಾಡಗೇರ ಮೊದಲಾದವರಿದ್ದರು.