ರಾಯಚೂರು: ಬಹುತೇಕ ಕೃಷಿಕರು ಬಡತನ ಎದುರಿಸುತ್ತಿದ್ದು, ಕೃಷಿಯಿಂದ ಬಂದ ಆದಾಯದಿಂದಲೇ ಜೀವನ ದೂಡುವವರಿದ್ದಾರೆ. ಹೀಗಾಗಿ ಅವರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸಮರ್ಪಕ ರಸಗೊಬ್ಬರ ವಿತರಿಸುವ ಮೂಲಕ ಉತ್ತಮ ಇಳುವರಿ ಬರುವಂತೆ ಮಾಡುವ ಹೊಣೆ ಇಲಾಖೆಗಳ ಮೇಲಿದೆ ಎಂದು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಹೇಳಿದರು.
ಕೃಷಿ ಇಲಾಖೆಯಿಂದ ತಾಲೂಕಿನ ಚಂದ್ರಬಂಡಾದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ವ್ಯಾಪ್ತಿಯ ಸಮಗ್ರ ಕೃಷಿ ಅಭಿಯಾನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅವರಿಗೆ ಬೇಕಾದ ಅಗತ್ಯ ಪರಿಕರಗಳನ್ನು ಸಮರ್ಪಕವಾಗಿ ವಿತರಿಸಬೇಕು.
ಎಲ್ಲಿಯೂ ಯಾವ ರೈತರಿಗೂ ಕೊರತೆಯಾಗದಂತೆ ನೋಡಿಕೊಳ್ಳಿ. ರಾಯಚೂರು ತಾಲೂಕು ಬಹುತೇಕ ಬಯಲುಸೀಮೆಯಾಗಿದ್ದು, ಮಳೆಯಾಶ್ರಿತ ಪ್ರದೇಶವಾಗಿದೆ. ಮಳೆ ಬಂದರೆ ಮಾತ್ರ ರೈತರಿಗೆ ಅನುಕೂಲ. ಇಂಥ ವೇಳೆ ಬೀಜ ಮತ್ತು ರಸಗೊಬ್ಬರ, ಕೃಷಿ ಸಾಮಗ್ರಿ ಸಕಾಲಕ್ಕೆ ಸಿಕ್ಕಲ್ಲಿ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಅದರ ಜತೆಗೆ ಕೀಟಬಾಧೆ ತಡೆಗೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡಿ ರೈತರು ಉತ್ತಮ ಫಸಲು ಬೆಳೆಯಲು ಸಹಕರಿಸಬೇಕು ಎಂದರು.
ಸಂಸದ ಬಿ.ವಿ.ನಾಯಕ ಮಾತನಾಡಿ, ರೈತರು ಇಂದು ಸಾಕಷ್ಟು ಸವಾಲು ಎದುರಿಸುವಂತಾಗಿದೆ. ಕಾಲಕಾಲಕ್ಕೆ ಅಗತ್ಯ ಸಲಹೆ, ಮಾರ್ಗದರ್ಶನ ಪಡೆಯಬೇಕು. ಸಮೀಪದ ಕೃಷಿ ಕೇಂದ್ರಗಳಿಗೆ ತೆರಳಿ ಅಧಿಕಾರಿಗಳು, ಕೃಷಿ ಇಲಾಖೆ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆದು ಬೆಳೆ ರಕ್ಷಿಸಿಕೊಳ್ಳಬೇಕು. ಅವೈಜ್ಞಾನಿಕ ಪದ್ಧತಿಗಳಿಂದ ಬೆಳೆ ಹಾನಿ ಮಾಡಿಕೊಂಡರೆ ಮುಂದೆ ನಿಮಗೆ ನಷ್ಟವಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದರು. ಜಿಪಂ ಸದಸ್ಯ ಎನ್.ಕೇಶವರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಮುಬ್ಜೀರ್ ರೆಹಮಾನ್ ಇದ್ದರು.