ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಟ್ಟು 40 ಕೋಟಿ ರೂ. ಅಂದಾಜು ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಲ್ಯಾಪ್ ಟಾಪ್ ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಯೋಜನೆ ಸಾರ್ಥಕವಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರು ಲ್ಯಾಪ್‌ಟಾಪ್ ವಿತರಿಸಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಉಚಿತ ವಿತರಣೆಗೆ ಸಚಿವ ಬಸವರಾಜ ರಾಯರೆಡ್ಡಿ ಅವರು ಸಲ್ಲಿಸಿದ ಪ್ರಸ್ತಾವನೆಗೆ ಮುಂದಿನ ಬಜೆಟ್ ವೇಳೆ ಸಂಪುಟ ಸಭೆಯಲ್ಲಿ ಅನುಮೋದನೆ ಒದಗುವ ವಿಶ್ವಾಸವಿದೆ ಎಂದರು.
ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳಿಗೆ ವೈಯಕ್ತಿಕ ಮೊತ್ತದಲ್ಲಿ ಬಸ್‌ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಹಿಂದೆ ಬಿಜೆಪಿಯವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಯಾವುದೇ ಸಾಮಗ್ರಿಗಳನ್ನು ನೀಡಿಲ್ಲ. ಕೇವಲ ಪ್ರಚಾರದ ಮೂಲಕ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ಸಮಾಜದಲ್ಲಿ ವಿಷ ಬೀಜ ಬಿತ್ತುವುದನ್ನು ಹಾಗೂ ಸಮಾಜವನ್ನು ಒಡೆಯುವ ಅಘಾತಕಾರಿ ಶಕ್ತಿಗಳನ್ನು ತಡೆಯುವ ಶಕ್ತಿ ವಿದ್ಯಾರ್ಥಿ ಸಮುದಾಯಕ್ಕಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಆರಂಭಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು. ಮಾಲವಿ, ದಶಮಾಪುರ, ಬೆಣ್ಣಿಕಲ್ಲು ಗ್ರಾಮಗಳ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ
ಮಧ್ಯಭಾಗದಲ್ಲಿ ಪಿಯುಸಿ ಕಾಲೇಜು ಆರಂಭಿಸಲಾಗುವುದು. ಇದೇ ವೇಳೆ ಕಾಲೇಜಿನ ಒಟ್ಟು 197 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿದರು. ಕಳೆದ ಬಾರಿ 5ನೇ ರ್‍ಯಾಂಕ್ ಪಡೆದ ಕಾಲೇಜಿನ ಮಮತಾ ಅವರನ್ನು ಶಾಸಕರು ಸನ್ಮಾನಿಸಿದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪ್ರಾಂಶುಪಾಲ ಗುರುರಾಜ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಹೆಗಾxಳ್ ಶ್ರೀನಿವಾಸ, ನವೀನ್‌ಕುಮಾರ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ಕೆಪಿಸಿಸಿ ಎಸ್‌ಟಿ ಘಟಕದ ಪವಾಡಿ ಹನುಮಂತಪ್ಪ, ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ಕನಕಪ್ಪ, ಹಂಚಿನಮನಿ ಹನುಮಂತಪ್ಪ, ಡಿಶ್ ಮಂಜುನಾಥ, ತಾಪಂ ಮಾಜಿ ಸದಸ್ಯ ದೇವೇಂದ್ರ, ವಾಲ್ಮೀಕಿ ಸಮಾಜದ ತಾಲೂಕು ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ರೈತ ಮುಖಂಡ ಅಡಿವೆಪ್ಪ, ದಾದಾಪೀರ್, ಸೋಗಿ ಕೊಟ್ರೇಶ್, ಪಾನ್‌ಶಾಪ್
ಪುಟ್ಟ, ಕೆಜಿಎನ್ ದಾದು ಇದ್ದರು. ಉಪನ್ಯಾಸಕರಾದ ಡಾ| ಹರಾಳು ಬುಳ್ಳುಪ್ಪ, ಚಂದ್ರಮೌಳಿ, ನಾಗನಗೌಡ ನಿರೂಪಿಸಿದರು.