ಹುಮನಾಬಾದ: ರೈತರಿಗೆ ಸಮಸ್ಯೆ ಉಂಟಾಗದಂತೆ ಎಲ್ಲ ಪಿಕೆಪಿಎಸ್ ಗಳಲ್ಲಿ ರಸಗೊಬ್ಬರ ವಿತರಣೆಗೆ ಸಕಲ ತಯಾರಿ ಮಾಡಿಕೊಂಡಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಂಗಾರು ಹಂಗಾಮಿನ ರಸಗೊಬ್ಬರ ವಿತರಣೆ ನಿಮಿತ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಂಸ್ಥೆಗೆ ಪೂರೈಕೆ ಮಾಡಲಾದ ರಸಗೊಬ್ಬರವನ್ನು ಸೂಕ್ತವಾಗಿ ರೈತರಿಗೆ ವಿತರಣೆ ಮಾಡಬೇಕು. ಯಾವುದೇ ಸಮಸ್ಯೆಗಳು ಉಂಟಾಗದಂತೆ ಜಾಗೃತೆ ವಹಿಸಬೇಕು ಎಂದು ಹುಮನಾಬಾದ, ಚಿಟಗುಪ್ಪ, ಬಸವಕಲ್ಯಾಣ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತ ಕಾರ್ಯದರ್ಶಿಗಳಿಗೆ ಸೂಚಿಸಿದರು.
ರೈತರಿಗೆ ಬೇಡಿಕೆಯಂತೆ ರಸಗೊಬ್ಬರ ನೀಡಲಾಗುತ್ತಿದ್ದು, ರಸಗೊಬ್ಬರ ಹೆಸರಿನಲ್ಲಿ ಸುಲಿಗೆ ನಡೆದರೆ ಕಠಿಣ ಕ್ರಮ ಜರುಗಿಸಲಾಗುವುದು. ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಆರೋಪಗಳು, ದೂರುಗಳು ಕೇಳಿಬಂದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಿಕೆಪಿಎಸ್ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರು.
ರಾಸಾಯನಿಕ ಸಚಿವ ಭಗವಂತ ಖೂಬಾ ನಮ್ಮ ಜಿಲ್ಲೆಯವರೆಯಾಗಿದ್ದು, ಅವರ ಜೊತೆಗೆ ಚರ್ಚಿಸಿದ್ದು, ಅವರು ಜಿಲ್ಲೆಗೆ ಯಾವುದೇ ತರಹದ ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಚಲುವಾ, ಡಿಸಿಸಿ ನಿರ್ದೇಶಕ ಜಗನಾಥ ರೆಡ್ಡಿ, ಕ್ಷೇತ್ರ ಸಹಾಯಕ ನಾಗೇಶ ಪತ್ರಿ, ಪ್ರದೀಪ ಉದ್ದಾ ಸೇರಿದಂತೆ ಅನೇಕರು ಇದ್ದರು.