ಕಲಬುರಗಿ: ರಾಜ್ಯದಲ್ಲಿ ಬರಗಾಲವಿದ್ದರೂ ಸರಕಾರ ಕಾಮಗಾರಿ ಆರಂಭಿಸುತ್ತಿಲ್ಲ. ಭೀಮಾ ಮತ್ತು ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಬತ್ತುವ ಸ್ಥಿತಿಯಲ್ಲಿದ್ದು ಮಹಾರಾಷ್ಟ್ರದಿಂದ ರಾಜ್ಯಕ್ಕೆ ನೀರು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ನಿಯೋಗ ಕೊಂಡೊಯ್ದರೆ ನಾವು ಬರಲು ಸಿದ್ಧ. ರಾಜ್ಯದ ಹಿತಕ್ಕಾಗಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬರ ಪರಿಹಾರದ ಜತೆ ಫ್ಲಡ್ ಕಿಟ್ ವಿತರಣೆ ಮಾಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೇಸಗೆ ಹಿನ್ನೆಲೆಯಲ್ಲಿ ದಿನೇದಿನೆ ಬೆಂಗಳೂರು ಸೇರಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ½ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ನಿಯಮಾವಳಿ ಬದಲಿಸಿಕೊಳ್ಳಬೇಕು. ಮಾತೆತ್ತಿದರೆ ಡಿಸಿ ಅಕೌಂಟ್‌ನಲ್ಲಿ ಸಾಕಷ್ಟು ಹಣ ಇಟ್ಟಿದ್ದೇವೆ ಎಂದು ಹೇಳುತ್ತಾರೆ.
ಆದರೆ, ನಿಯಮಾವಳಿಯಂತೆ ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು ಸಾಧ್ಯವಿಲ್ಲ. ಹಳೇ ಬೋರ್‌ಗಳಲ್ಲಿ ನೀರು ಬರುತ್ತಿಲ್ಲ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್‌ಗಳ ಮೇಲೆ ಅವಲಂಬನೆ ಆಗಬೇಕು. ಆದರೆ, ಅದೊಂದು ದೊಡ್ಡ ಮಾಫಿಯಾ ಆಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು, ಅಗತ್ಯವಿದ್ದ ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಿ ಎಂದರು.
ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟು ಜನರಿಗೆ ಸಮಸ್ಯೆಯಾದರೆ ನಾವು ಸುಮ್ಮನಿರಲ್ಲ. 11 ರಾಜ್ಯಗಳಲ್ಲಿ ಬರಗಾಲಕ್ಕೆ ಹಣವಿದೆ. ಕರ್ನಾಟಕದಲ್ಲಿ ಏಕೆ ಇಲ್ಲ? ನರೇಗಾದಲ್ಲಿ ಕೂಲಿ ನಿಲ್ಲಿಸಲಾಗಿದೆ. ರಾಜ್ಯ ತನ್ನ ಹಣ ಕೊಡಬೇಕು. ನರೇಗಾ ಕೂಲಿಯನ್ನು 90, 150 ದಿನಗಳಲ್ಲಿ ಹೆಚ್ಚಳ ಮಾಡಲು ಬರಗಾಲ ಘೋಷಣೆ ನಿಯಮಾವಳಿಯಲ್ಲೇ ಇದೆ. ಸುಮ್ಮನೆ ಕೇಂದ್ರ ಸರಕಾರದತ್ತ ಬೊಟ್ಟು ಮಾಡೋದು ಸರಿಯಲ್ಲ.
– ಆರ್.ಅಶೋಕ, ವಿಪಕ್ಷ ನಾಯಕ