ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆಹಾನಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಳೆಹಾನಿ ನಿರ್ವಹಣೆ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು, ಸಾರ್ವಜನಿಕ ಆಸ್ತಿ ನಷ್ಟವಾಗಿದೆ. ಇದರ ನಿಖರ ಅಂದಾಜು ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ರೈತರ ಜಮೀàನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಮಳೆ ಹಾನಿಗೀಡಾಗಿರುವ ಸೇತುವೆ, ರಸ್ತೆಗಳನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಮನೆ ಹಾನಿ, ಶಾಲೆ, ಅಂಗನವಾಡಿ ಕಟ್ಟಡಗಳ ಹಾನಿಗಳ ಸೂಕ್ತ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
51,523 ಹೆಕ್ಟೇರ್ ಬೆಳೆ ಹಾನಿ: ಜಂಟಿ ಕೃಷಿ ನಿರ್ದೇಶಕ ರವಿ ಮಾತನಾಡಿ, ಜಿಲ್ಲೆಯಲ್ಲಿ ಬಿದ್ದ ಅಪಾರ ಮಳೆಯಿಂದಾಗಿ ರಾಗಿ, ಮುಸುಕಿನ ಜೋಳ, ಭತ್ತ ಮತ್ತು ಕಡಲೆ ಬೆಳೆಗಳು ಹಾನಿಗೊಳಗಾಗಿವೆ. 41,234 ಹೆಕ್ಟರ್ ರಾಗಿ ಬೆಳೆಗೆ ಹಾನಿಯಾಗಿದ್ದರೆ, 8,900 ಹೆಕ್ಟೇರ್‌ನಲ್ಲಿ ಮುಸುಕಿನ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 51,523 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪೋರ್ಟಲ್‌ನಲ್ಲಿ 47,000 ಅರ್ಜಿ ನೋಂದಣಿಯಾಗಿವೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಾನಿಯ ಜಂಟಿ ಸಮೀಕ್ಷೆ: ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ 1985 ಹೆಕ್ಟೇರ್‌ನಷ್ಟು ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಶುಂಠಿ, ಹೂವಿನ ಬೆಳೆ, ತರಕಾರಿ ಹಾಗೂ 17 ಸಾವಿರ ಹೆಕ್ಟೇರ್‌ನಷ್ಟು ಕಾಫಿ ಬೆಳೆಗಳು ಹಾನಿಗೊಳಗಾಗಿದ್ದು, ಈ ಎಲ್ಲ ಬೆಳೆಗಳ ಹಾನಿಯ ಜಂಟಿ ಸಮೀಕ್ಷೆ ನಡೆಸಲಾಗಿದೆ. ಅರ್ಜಿಗಳ ಸ್ವೀಕಾರವಾಗಿದ್ದು, ಪರಿಹಾರ ಪೋರ್ಟಲ್‌ನಲ್ಲಿ ಸುಮಾರು 200 ಹೆಕ್ಟೇರ್ ನಷ್ಟು ನೊಂದಣಿಯಾಗಿದೆ ಎಂದು ತಿಳಿಸಿದರು.
40 ಕಿ.ಮೀ. ರಸ್ತೆ ಹಾನಿ: ನಿರಂತರ ಮಳೆಯಿಂದ 39.85 ಕಿ.ಮೀ, ರಾಜ್ಯ ಹೆದ್ದಾರಿ ಹಾನಿಗೊಳಗಾಗಿದ್ದು, ಬೇಲೂರು, ಸಕಲೇಶ ಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಹೆಚ್ಚಿನ ರಸ್ತೆ ಹಾನಿಗೊಳಗಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಅಭಿಯಂತರ ಮಂಜುನಾಥ್ ಹೇಳಿ ದರು.ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಮಳೆಹಾನಿ ಸಮೀಕ್ಷೆ ನಡೆಸಲಾ ಗುತ್ತಿದೆ. ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ತ್ವರಿತವಾಗಿ ಸ್ಥಳ ಪರಿಶೀಲನಾ ವರದಿ ನೀಡಲು ಸೂಚಿಸಲಾಗಿದೆ . ಫ್ರೂಟ್ಸ್ ಐಡಿ ದಾಖಲೆಯಲ್ಲಿ ಶೇ.100ರಷ್ಟು ಗುರಿ ಸಾಧನೆಗೆ ಸೂಚನೆ ನೀಡಲಾಗಿದೆ ಎಂದರು.
ಜಿಪಂ ಸಿಇಒ ಬಿ.ಎ.ಪರಮೇಶ್, ಉಪ ವಿಭಾಗಾಧಿಕಾರಿಗಳಾದ ಬಿ.ಎ. ಜಗದೀಶ್, ಪ್ರತೀಕ್ ಬಾಯಲ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು