Advertisement

ಬಿರುಗಾಳಿ ಮಳೆಗೆ ನಲುಗಿದ ಜಿಲ್ಲೆ

12:20 PM May 25, 2019 | pallavi |

ಗದಗ: ಗದಗ- ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ತೋಟಗಾರಿಕೆ ಬೆಳೆಗಾರರ ಬದುಕು ಅಕ್ಷರಶಃ ನಲುಗಿ ಹೋಗಿದೆ. ಗದಗ ಮತ್ತು ಶಿಹರಟ್ಟಿ ತಾಲೂಕಿನ ವಿವಿಧೆಡೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಬಿರುಗಾಳಿಯಿಂದ ಸುಮಾರು 113 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡು ಗ್ರಾಮಗಳನ್ನು ಕತ್ತಲೆಗೆ ದೂಡಿದರೆ, ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದರ ಪರಿಣಾಮ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

Advertisement

ಹೌದು, ಕಳೆದ ಐದಾರು ವರ್ಷಗಳಿಂದ ಸತತ ಬರದಿಂದ ಕಂಗೆಟ್ಟಿರುವ ರೈತರಿಗೆ ಗುರುವಾರ ರಾತ್ರಿ ಸುರಿದ ವರ್ಷಧಾರೆ ಉತ್ತಮ ಮುಂಗಾರಿನ ಭರವಸೆ ಮೂಡಿಸಿದ್ದು, ರೈತಾಪಿ ಜನರಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಮಳೆಯೊಂದಿಗೆ ಬಿರುಗಾಳಿ ಬೀಸಿದ್ದರಿಂದ ಗೊನೆ ಬಿಟ್ಟಿದ್ದ ಹತ್ತಾರು ಹೆಕ್ಟರ್‌ ಪ್ರದೇಶದ ಬಾಳೆ ಗಿಡಗಳು ಮುರಿದು ಬಿದ್ದಿವೆ. ಭಾರೀ ಲಾಭದ ನಿರೀಕ್ಷೆಯಲ್ಲಿದ್ದ ಬಾಳೆ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ಗದಗ ತಾಲೂಕಿನ ಕಳಸಾಪುರ, ಹರ್ತಿ, ಶಾಗೋಟಿ, ಹುಲಕೋಟಿ, ಮುಳಗುಂದ, ಹರ್ತಿ, ಹೊಸಳ್ಳ, ದೂಂದೂರು ಹಾಗೂ ಶಿರಹಟ್ಟಿ ತಾಲೂಕಿನ ಚಿಕ್ಕ ಸವಣೂರು ಭಾಗದಲ್ಲಿ ಹೆಚ್ಚಾಗಿ ಬಾಳೆ ಬೆಳೆಯಲಾಗಿದೆ. ಸತತ ಬರದ ಮಧ್ಯೆಯೂ ಆಳೆತ್ತರಕ್ಕೆ ಬೆಳೆದು ನಿಂತಿದ್ದ ಬಾಳೆ ಗಿಡಗಳ ರಕ್ಷಣೆಗಾಗಿ ಸಾಲ ಸೋಲ ಮಾಡಿ ಸಾವಿರಾರು ರೂ. ಖರ್ಚು ಮಾಡಿದ್ದ ರೈತರು, ಇನ್ನೊಂದು ತಿಂಗಳಲ್ಲಿ ಬೆಳೆ ಮಾರಾಟ ಮಾಡಿ, ಕೈತುಂಬ ಕಾಸು ನೋಡುವ ಕನಸು ಕಂಡಿದ್ದರು. ಆದರೆ, ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಗದಗ, ಶಿರಹಟ್ಟಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 55ರಿಂದ 60 ಹೆಕ್ಟರ್‌ ಪ್ರದೇಶದ ಬಾಳೆ ಗಿಡಗಳು ಹಾನಿಗೊಳಗಾಗಿದೆ. ಅದರೊಂದಿಗೆ ಮಾವು, ಕಬ್ಬು, ಗೋಂಡಬಿ ಗಿಡಗಳು ಮುರಿದು ಬಿದ್ದಿದ್ದು, 1.25 ಕೋಟಿ ರೂ.ಗಿಂತ ಅಧಿಕ ಬೆಳೆ ಹಾನಿ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಧರೆಗುರುಳಿದ 113 ವಿದ್ಯುತ್‌ ಕಂಬಗಳು: ಗುರುವಾರ ಸಂಜೆಯಿಂದಲೇ ಬೀಸಿದ ಬಿರುಗಾಳಿಗೆ ಗದಗ ಹಾಗೂ ಮುಂಡರಗಿ ತಾಲೂಕಿನಲ್ಲಿ ಒಟ್ಟು 113 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಆ ಪೈಕಿ ಗದಗ ತಾಲೂಕಿನ ಶಾಗೋಟಿ, ಅಡವಿಸೋಮಾಪುರ, ಕಳಸಾಪುರ, ದುಂದೂರು, ನಾಗಾವಿ, ಹೊಂಬಳ, ಹುಯಿಲಗೋಳ ಭಾಗದಲ್ಲಿ ಸುಮಾರು 80ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ ಎಂದು ಹೇಳಲಾಗಿದೆ.

ಮಳೆಯೊಂದಿಗೆ ಭಾರಿ ಗುಡುಗು, ಸಿಡಿಲಿನಿಂದ ಹಳೆ ಬಸ್‌ ನಿಲ್ದಾಣ ಸಮೀಪದ ಒಂದು ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿದೆ. ಇನ್ನುಳಿದಂತೆ ವೀರನಾರಾಯಣ ದೇವಸ್ಥಾನ, ರೆಹಮತ ನಗರ, ಹಳೆ ಬಸ್‌ ನಿಲ್ದಾಣ, ಮಹೇಂದ್ರಕರ್‌ ವೃತ್ತ, ಬಸವೇಶ್ವರ ನಗರ ಸೇರಿದಂತೆ ತಾಲೂಕಿನ ವಿವಿಧಡೆ ಹತ್ತಾರು ಬೃಹತ್‌ ಮರಗಳು ನೆಲಕ್ಕುರುಳಿವೆ. ಅವುಗಳಲ್ಲಿ ಕೆಲವು ವಿದ್ಯುತ್‌ ತಂತಿಗಳ ಮೇಲೆ ಮುರಿದು ಬಿದ್ದಿದ್ದರಿಂದ ಗದಗ ನಗರದಲ್ಲಿ ರಾತ್ರಿಯಿಡೀ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಅವಳಿ ನಗರದಲ್ಲಿ ರಾತ್ರಿಯೇ ತುಂತಡಾಗಿದ್ದ ವಿದ್ಯುತ್‌ ತಂತಿಗಳನ್ನು ಸರಿಪಡಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

Advertisement

ಮನೆಗಳಿಗೆ ನುಗ್ಗಿದ ಮಳೆ ನೀರು: ಇಲ್ಲಿನ ರೆಹಮತ ನಗರ, ಬೆಟಗೇರಿಯ ಹಲವೆಡೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಭಾರಿ ಅವಾಂತರವನ್ನೇ ಸೃಷ್ಟಿಸಿತು. ಮನೆಯಲ್ಲಿರುವಧವಸ ಧಾನ್ಯಗಳು, ದಿನಬಳಕೆ ವಸ್ತುಗಳನ್ನು ಮಳೆ ನೀರಿನಿಂದ ರಕ್ಷಿಸಲು ಸಾರ್ವಜನಿಕರು ಪರದಾಡಿದರು. ಇನ್ನೂ, ಕೆಲವರು ಮಳೆ ಕಡಿಮೆಯಾಗುತ್ತಿದ್ದಂತೆ ಮನೆಯಲ್ಲಿ ನಿಂತಿದ್ದ ನೀರು ಹೊರ ಹಾಕಲು ಹರಸಾಹಸ ನಡೆಸಿದರು.

ಜಿಲ್ಲೆಯಾದ್ಯಂತ ಗುರುವಾರ ಸಂಜೆ ಸುರಿದ ಮಳೆಯಿಂದ ಒಟ್ಟು 158.5 ಮಿ.ಮೀ. ಮಳೆ ದಾಖಲಾಗಿದೆ. ಆ ಪೈಕಿ ಗದಗಿನಲ್ಲಿ 42 ಮಿ.ಮೀ., ಮುಂಡರಗಿಯಲ್ಲಿ 33.8 ಮಿ.ಮೀ., ನರಗುಂದ ತಾಲೂಕಿನಲ್ಲಿ 44.9 ಮಿ.ಮೀ., ರೋಣದಲ್ಲಿ 17 ಮಿ.ಮೀ. ಹಾಗೂ ಶಿರಹಟ್ಟಿಯಲ್ಲಿ 20.8 ಮಿ.ಮೀ. ನಷ್ಟು ಮಳೆಯಾಗಿದೆ.

ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತೋಟದ ಮನೆಯ ಮೆಲ್ಛಾವಣಿ(ತಗಡುಗಳು) ಹಾರಿ ಹೋದವು. ಟಿನ್‌ಗಳ ಮೇಲೆ ಭಾರವಿರಲು ಇಡಲಾಗಿದ್ದ ದೊಡ್ಡ ಕಲ್ಲುಗಳು ಕಾಲ್ಚೆಂಡಿನಂತೆ ತೂರಿ ಬಂದವು. ನೋಡ ನೋಡುತ್ತಿದ್ದಂತೆ ವಿದ್ಯುತ್‌ ಕಂಬಗಳು, ಬದುವಿನಲ್ಲಿದ್ದ ಬೃಹತ್‌ ಮರಗಳು ನೆಲಕ್ಕುರಳಿದವು. ಇದರಿಂದ ಬೆದರಿದ ನಾವೆಲ್ಲಾ ರಸ್ತೆಯ ದಿಬ್ಬದ ಮೇಲೆ ನಿಂತಿದ್ದೆವು. ತೋಟದಲ್ಲಿ ಬೆಳೆದಿದ್ದ ಗೋಡಂಬಿ, ಮಾವಿನ ಬೆಳೆ ಹಾನಿಯಿಂದ ಐದಾರು ಲಕ್ಷ ರೂ. ನಷ್ಟವಾಗಿದೆ.

•ಫಕ್ಕಿರೇಶಪ್ಪ ಕೋರ್ಲಹಳ್ಳಿ, ಶ್ಯಾಗೋಟಿ ಗ್ರಾಮದ ರೈತ

ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಗದಗ, ಶಿರಹಟ್ಟಿ ತಾಲೂಕಿನ ಹಲವೆಡೆ ಹೆಚ್ಚಾಗಿ ಬಾಳೆ ಬೆಳೆ ಹಾನಿಯಾಗಿದೆ. ಜೊತೆಗೆ ಮಾವು, ಕಬ್ಬು, ಗೊಂಡಬಿ ಬೆಳಗಳು ನಾಶವಾಗಿವೆ. ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪ್ರಕೃತಿ ವಿಕೋಪ ನಿಯಮದಡಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದೆ.

•ಎಲ್. ಪ್ರದೀಪ, ಕೃಷಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next