Advertisement

ಜಿಲ್ಲಾಡಳಿತ ಕಾರ್ಯಕ್ಕೆ ಅಸಮಾಧಾನ

10:45 AM May 29, 2019 | Suhan S |

ಹಾವೇರಿ: ಉದ್ಯೋಗ ಖಾತ್ರಿ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಶಾಲಾ ಮಕ್ಕಳಿಗೆ ಪಾಠ ಮಾಡುವ ರೀತಿಯಲ್ಲಿ ವಿವರವಾಗಿ ಪತ್ರ ಬರೆಯಲಾಗಿದೆ. ಆದರೂ ಜಿಲ್ಲೆಯಲ್ಲಿ ಬರ ಪರಿಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಾವ ಕೆಲಸಗಳೂ ಆಗಿಲ್ಲ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅತೃಪ್ತಿ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ಬರಪೀಡಿತ ಆಯ್ದ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರಪರಿಹಾರ ಕಾಮಗಾರಿಗಳಿಗಾಗಿ ಜಿಲ್ಲಾಡಳಿತಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ಜಿಲ್ಲಾಡಳಿತದ ಬಳಿ 19 ಕೋಟಿ ರೂ. ಹಣ ಉಳಿದಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿತ್ತು. ಟಾಸ್ಕ್ಪೋರ್ಸ್‌ ಮತ್ತು ಬರ ನಿರ್ವಹಣೆಗಾಗಿ ಜಿಲ್ಲೆಗೆ ಬೇಕಾದ ಅನುದಾನ ಕುರಿತಂತೆ ಬೇಡಿಕೆ ಸಲ್ಲಿಸಲು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದರೂ ಕೆಲಸವಾಗಿಲ್ಲ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು. ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ಈ ದಿನ ಸಂಜೆಯೇ ಸಭೆ ನಡೆಸಿ ಕುಡಿಯುವ ನೀರು, ಪೈಪ್‌ಲೈನ್‌ ಅಳವಡಿಕೆಗೆ ತಾಲೂಕುವಾರು ಅಗತ್ಯ ಅನುದಾನ ಈ ರಾತ್ರಿಯೊಳಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಕುಡಿಯುವ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಉದಾರವಾಗಿರಬೇಕು. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಗ್ರಾಮದ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಬೇಕು. ಗ್ರಾಮದಿಂದ ಕೊಳವೆಬಾವಿ ಪಾಯಿಂಟ್ ದೂರವಿದ್ದರೆ ಪೈಪ್‌ಲೈನ್‌ ಅಳವಡಿಸುವ ತನಕ ಟ್ಯಾಂಕರ್‌ ಬಳಸಿ ನೀರು ಒದಗಿಸಿ ಎಂದು ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.

ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 31 ಕೊಳವೆಬಾವಿಗಳನ್ನು ಕೊರೆಸಲು ವಿಳಂಬ ಮಾಡಿದ ಅಧಿಕಾರಿಗಳನ್ನು ಸಭೆಯಲ್ಲಿ ತೀವ್ರ ತರಾಟೆ ತೆಗೆದುಕೊಂಡ ಸಚಿವರು, ಈ ಸಂಜೆಯೊಳಗೆ ಸಮಸ್ಯೆ ಪರಿಹರಿಸಿ ಬೆಳಗಿನ ವೇಳೆಯೊಳಗೆ ಡ್ರಿಲ್ಲಿಂಗ್‌ ಕಾರ್ಯ ಆರಂಭಿಸಬೇಕು. ಯಾವುದೇ ಶಾಸಕರು, ಸಚಿವರು ಅಧಿಕಾರಿಗಳಿಗಿಂತ ನಿಯಮಾವಳಿ ಮುಖ್ಯ. ನಿಯಮಾವಳಿ ಅನ್ವಯ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

Advertisement

ಈ ಮೊದಲೇ ತಿಳಿಸಿದ ಹಾಗೆ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಬೇಕು. ಈ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದರೆ ತಕ್ಷಣವೇ ಟ್ಯಾಂಕರ್‌ ಬಳಸಿ ನೀರು ಪೂರೈಸಿ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ ಬಾಡಿಗೆಗಳನ್ನು ಕಾಲಮಿತಿಯೊಳಗೆ ಪಾವತಿಸಬೇಕು ಎಂದು ಸೂಚಿಸಿದರು.

ಕೊಳವೆಬಾವಿ ಪಾಯಿಂಟ್ ದೂರವಿದ್ದರೆ ಪೈಪ್‌ಲೈನ್‌ ಅಳವಡಿಸುವ ತನಕ ಟ್ಯಾಂಕರ್‌ ಬಳಸಿ ನೀರು ಒದಗಿಸಲು ಅನುದಾನಕ್ಕೆ ಟಾಸ್ಕಫೋರ್ಸ್‌ ಅಡಿ 1.5 ಲಕ್ಷ ರೂ.ವರೆಗೆ ಪಾವತಿಸಲು ಅವಕಾಶವಿದೆ. ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಶಾಸಕರ ಅನುದಾನದಿಂದ ಭರಿಸಬೇಕು. ಒಂದೊಮ್ಮೆ ಈ ಹಣವೂ ಸಾಕಾಗಾಗದಿದ್ದರೆ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿ ಇಂತಹ ಪ್ರಕರಣಗಳಲ್ಲಿ ಬೇಕಾದ ಅನುದಾನ ಕುರಿತಂತೆ ತಾಲೂಕುವಾರು ಅಗತ್ಯ ಅನುದಾನದ ವಿವರವನ್ನು 24 ತಾಸಿನೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಸಿಇಒ ಕೆ.ಲೀಲಾವತಿ, ಜಿಲ್ಲೆಯ ಬರಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಸಭೆಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿಗಳಾದ ತಿಪ್ಪೇಸ್ವಾಮಿ ಹಾಗೂ ಹರ್ಷಲ್ ನಾರಾಯಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next