Advertisement

ಶಿಕ್ಷಣ ಮೊಟಕುಗೊಳಿಸಿದವರಿಗೆ ನೆರವಾಗುವ ದೂರ ಶಿಕ್ಷಣ

12:08 AM Sep 04, 2019 | mahesh |

ದೇಶದಲ್ಲಿ ಅದೆಷ್ಟೋ ಜನ ಆರ್ಥಿಕ ಹಿನ್ನಡೆ, ಆರೋಗ್ಯ  ಸಮಸ್ಯೆ ಹೀಗೆ ಅನೇಕ
ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರು ಇದ್ದಾರೆ. ಕಲಿಯುವ ಆಸಕ್ತಿ ಇದ್ದರೂ ಸೂಕ್ತ ಹಣಕಾಸಿನ ವ್ಯವಸ್ಥೆಯಿಲ್ಲದೆ ಅಥವಾ ಕಾಲೇಜಿಗೆ ತೆರಳಲಾಗದೇ ಶಿಕ್ಷಣದಿಂದ 
ದೂರ ಉಳಿಯುತ್ತಾರೆ. ಅಂಥವರಿಗೆ ನೆರವಾಗುವ ಶಿಕ್ಷಣ ಅಂಚೆ ತೆರಪಿ ಅಥವಾ ದೂರ ಶಿಕ್ಷಣ. ಮನೆಯಲ್ಲೇ ಕೂತು, ಉದ್ಯೋಗ ಮಾಡುತ್ತಾ ಅಥವಾ ಅರ್ಧದಲ್ಲೇ ವಿದ್ಯಾಭ್ಯಾಸ
ಮೊಟಕು ಗೊಳಿಸಿದವರಿಗೆ ವ್ಯಾಸಂಗ ಮಾಡಲು ಅನುವು ಮಾಡಿಕೊಡುತ್ತದೆ ಈ ಶಿಕ್ಷಣ ವ್ಯವಸ್ಥೆ.

Advertisement

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ವ್ಯವಸ್ಥೆಗಳಲ್ಲಿ ದೂರಶಿಕ್ಷಣ ಕೂಡ ಒಂದು. ಶಾಲೆ-ಕಾಲೇಜುಗಳಿಗೆ ತೆರಳಿ ಶಿಕ್ಷಣ ಪಡೆಯದೇ ಅಂಚೆ ತೆರಪಿನ ಮುಖೇನ ಶಿಕ್ಷಣ ಪಡೆಯುವ ವ್ಯವಸ್ಥೆ ಇದಾಗಿದೆ. ಒಂದೆಡೆ ಕುಳಿತು ನಾನಾ ವಿವಿಧ ಕೆಲಸಗಳಲ್ಲಿ ನಿರತವಾಗಿರುವವರಿಗೆ ಏಕಕಾಲದಲ್ಲಿ ಕೆಲಸಗಳನ್ನು ನಿಭಾಯಿಸುತ್ತಾ ಶಿಕ್ಷಣ ಹೊಂದುವ ಅವಕಾಶ ದೂರಶಿಕ್ಷಣ ವ್ಯವಸ್ಥೆಯಲ್ಲಿದೆ.

ಕಾರ್ಮಿಕರು, ಆರ್ಥಿಕವಾಗಿ ಹಣಕಾಸಿನ ಸಮಸ್ಯೆ ಅನುಭವಿಸುತ್ತಿರುವವರು, ವಿವಿಧ ಸಮಸ್ಯೆಗಳಿಂದ ಶಿಕ್ಷಣ ಪಡೆಯಲು ಅಸಾಧ್ಯವಾಗುವವರಿಗೆ ದೂರ ಶಿಕ್ಷಣವು ಅನುಕೂಲ ಮಾಡುತ್ತದೆ. ಇದರ ಮುಖೇನ ವಿದ್ಯಾರ್ಥಿಗೆ ಹಣದ ಉಳಿತಾಯದ ಜತೆ, ಸುಲಭವಾಗಿ ಕಲಿಕೆಯೂ ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕು ರೂಪಿಸಲು, ಅರ್ಧಕ್ಕೆ ನಿಂತ ಶಿಕ್ಷಣವನ್ನು ಪುನಃ ಪ್ರಾರಭಿಸುವ ನಿಟ್ಟಿನಲ್ಲಿ ಇದು ಸಹಕಾರಿ.

ದೂರ ಶಿಕ್ಷಣ ನೀಡಲು ಯುಜಿಸಿಯು ಕೆಲವೊಂದು ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಿದೆ. ಅದರಂತೆಯೇ ಮಂಗಳೂರು ವಿ.ವಿ., ಮೈಸೂರು ವಿ.ವಿ., ಕುವೆಂಪು ವಿ.ವಿ., ಬೆಂಗಳೂರು ವಿ.ವಿ. ಸೇರಿದಂತೆ ಕೆಲವೊಂದು ಯುನಿವರ್ಸಿಟಿಗಳಲ್ಲಿ ದೂರಶಿಕ್ಷಣದ ಕೋರ್ಸ್‌ ಗಳಿವೆ. ದೂರಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿಗೆ ಕೆಎಸ್‌ಒಯು (ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ)ನಲ್ಲಿಯೂ ಕೋರ್ಸ್‌ಗಳಿದ್ದು, ಇತ್ತೀಚೆಗೆಯಷ್ಟೇ ಅರ್ಜಿ ಆಹ್ವಾನಿಸಲಾಗಿತ್ತು. ಕೆಎಸ್‌ಒಯುನಲ್ಲಿ ಬಿಎ, ಬಿಕಾಂ. ಎಂ.ಎ., ಎಂಕಾಂ., ಬಿ.ಲಿಬ್‌.ಐಎಸ್ಸಿ., ಎಂ.ಲಿಬ್‌.ಎಎಸ್ಸಿ., ಎಂ.ಎಸ್ಸಿ, ಡಿಪ್ಲೊಮಾ, ಪಿಜಿ ಡಿಪ್ಲೊಮ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅವಕಾಶವಿದೆ. ಎಂಬಿಎ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಇರುತ್ತದೆಯೇ ವಿನಾಃ ಉಳಿದ ಯಾವುದೇ ವಿಷಯಗಳ ಪ್ರವೇಶಕ್ಕೆ ಪರೀಕ್ಷೆಗಳು ಇರುವುದಿಲ್ಲ.

ದೂರಶಿಕ್ಷಣ ಪಡೆಯಲು ಯಾವುದೇ ಪ್ರಾಯದ ಮಿತಿ ಇಲ್ಲ. ಪದವಿ ಶಿಕ್ಷಣ ಪಡೆಯಲು ಪಿಯುಸಿ ಪೂರ್ಣಗೊಳಿಸಿರಬೇಕು. ಮಂಗಳೂರು ವಿವಿಯಲ್ಲಿ ಬಿಎ, ಬಿಕಾಂ, ಬಿಬಿಎ ಸೇರಿದಂತೆ ವಿವಿಧ ದೂರ ಶಿಕ್ಷಣದ ಕೋರ್ಸ್‌ಗಳು ಕೂಡ ಇದೆ. ಕೆಲವೊಂದು ಮಂದಿ ಉದ್ಯೋಗದಲ್ಲಿದ್ದು, ನಿವೃತ್ತ ಹೊಂದಿದ ಬಳಿಕವೂ ದೂರಶಿಕ್ಷಣ ಪಡೆಯುತ್ತಾರೆ. ಮತ್ತೂ ಕೆಲವರು ಉದ್ಯೋಗದಲ್ಲಿದ್ದು, ಉದ್ಯೋಗದ ಪ್ರೊಮೋಶನ್‌ಗೂ ದೂರಶಿಕ್ಷಣದ ಮೊರೆ ಹೋಗುತ್ತಾರೆ.

Advertisement

ದೂರಶಿಕ್ಷಣ ತರಬೇತಿಗೆ ಪ್ರವೇಶಾತಿಯ ಬಳಿಕ ಆಯಾ ಯುನಿವರ್ಸಿಟಿಗಳು ಅಭ್ಯಾಸ ಪಠ್ಯಪುಸ್ತಕಗಳನ್ನು ನೀಡುತ್ತವೆೆ. ಬಳಿಕ ಪಠ್ಯ ವಿಷಯದಲ್ಲಿ ಯಾವುದೇ ಸಂದೇಹಗಳಿದ್ದರೆ ಸುಮಾರು 4 ತಿಂಗಳಿಗೊಮ್ಮೆ ಕಾಂಟೆಕ್ಟ್ ಪ್ರೋಗ್ರಾಂ ಇರುತ್ತದೆ. ವರ್ಷದಲ್ಲಿ ಒಂದು ಬಾರಿ ಪರೀಕ್ಷೆ ಇರುತ್ತದೆ.

ಅಭ್ಯರ್ಥಿಗಳಿಗೆ ಜಾಗೃತಿ ಮುಖ್ಯ
ಯಾವುದೇ ವಿಷಯದಲ್ಲಿ ಕರೆಸ್ಪಾಂಡೆನ್ಸ್‌ ಪದವಿ ಮಾಡುವುದಕ್ಕೂ ಮುನ್ನ, ಆ ಪದವಿ ಅಥವಾ ಕೋರ್ಸ್‌ ಯುಜಿಸಿಯಿಂದ ಮಾನ್ಯತೆ ಪಡೆದಿದೆಯೇ ಮತ್ತು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಮಾನ್ಯತೆ ಹೊಂದಿದೆಯೇ ಎಂಬುವುದನ್ನು ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವಾಗ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ಪದವಿ ಅಗತ್ಯವಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ, ರೈಲ್ವೇ, ಸಿಬಂದಿ ನೇಮಕಾತಿ ವಿಭಾಗ ಸೇರಿದಂತೆ ನೇಮಕಾತಿ ಸಂಸ್ಥೆಗಳು ದೂರಶಿಕ್ಷಣ ಪೂರ್ಣಗೊಳಿಸಿದಂತಹ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕೆ ಅನುಮತಿಯನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು ದೂರ ಶಿಕ್ಷಣದ ಮೂಲಕ ಪದವಿಯನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ ಅಥವಾ ಪದವಿಯನ್ನು ಸೇರುವುದಕ್ಕೂ ಮುನ್ನ ಆ ಕೋರ್ಸ್‌/ಪದವಿ ಮಾನ್ಯತೆ ಪಡೆದಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕವೇ ಕೋರ್ಸ್‌ಗೆ ಸೇರುವುದು ಉತ್ತಮ.
Advertisement

Udayavani is now on Telegram. Click here to join our channel and stay updated with the latest news.

Next